
ಮಹಿಳಾ ಮೀಸಲಾತಿ ಜಾರಿಗೆ ಬದ್ಧತೆ ಪುನರುಚ್ಚರಿಸಿದ ಪ್ರಧಾನಿ ಮೋದಿ
ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ತಮ್ಮ ಸರ್ಕಾರದ ಬದ್ಧತೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ
ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ತಮ್ಮ ಸರ್ಕಾರದ ಬದ್ಧತೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ನಾರಿ ಶಕ್ತಿ ವಂದನ್ ತಿದ್ದುಪಡಿಯನ್ನು ಕಾಲದ ಬೇಡಿಕೆ ಎಂದು ಕರೆದಿರುವ ಅವರು, ಮಹಿಳಾ ಸಬಲೀಕರಣದ ಭರವಸೆಯನ್ನು ಈಡೇರಿಸುವ ತಮ್ಮ ಸಂಕಲ್ಪ ಅಜೇಯವಾಗಿ ಉಳಿದಿದೆ ಎಂದು ತಿಳಿಸಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಸಂದೇಶದಲ್ಲಿ ಮೋದಿ ಅವರು, ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸುವ ಪ್ರಯತ್ನಗಳು ದಶಕಗಳಿಂದ ನಡೆಯುತ್ತಿವೆ ಎಂದಿದ್ದು, ದೀರ್ಘಕಾಲದ ಈ ಬೇಡಿಕೆಯನ್ನು ನನಸಾಗಿಸಲು ತಾವೂ ಕೂಡ ಶ್ರಮಿಸುತ್ತಿದ್ದೆ ಎಂದು ಹೇಳಿದ್ದಾರೆ. ನಾರಿ ಶಕ್ತಿಗೆ ಪಾಲ್ಗೊಳ್ಳುವಿಕೆ ನೀಡುವ ಹೋರಾಟ ದಶಕಗಳಿಂದ ನಡೆಯುತ್ತಿದೆ, ಹಲವು ವರ್ಷಗಳಿಂದ ಇದನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದವರಲ್ಲಿ ತಾನೂ ಒಬ್ಬನಾಗಿದ್ದೆ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಬಿಜೆಪಿ-ಎನ್ಡಿಎ ನೀಡಿರುವ ಪ್ರತಿಜ್ಞೆ ಹಾಗೆಯೇ ಉಳಿದಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ
ರಾಷ್ಟ್ರೀಯ ಹಿತಾಸಕ್ತಿ ಯಾವಾಗಲೂ ಮೊದಲಿರಬೇಕು ಎಂದು ಒತ್ತಿಹೇಳಿರುವ ಅವರು, ದೇಶದ ವಿಶಾಲ ಹಿತಾಸಕ್ತಿಗಳಿಗಿಂತ ರಾಜಕೀಯ ಲೆಕ್ಕಾಚಾರಗಳಿಗೆ ಆದ್ಯತೆ ನೀಡುವುದು ರಾಷ್ಟ್ರೀಯ ಹಿತಾಸಕ್ತಿ ಮತ್ತು ಮಹಿಳಾ ಸಬಲೀಕರಣ ಎರಡಕ್ಕೂ ಧಕ್ಕೆ ತರುತ್ತದೆ ಎಂದು ಪ್ರತಿಪಾದಿಸಿದ್ದಾರೆ. ತಮಗೆ ರಾಷ್ಟ್ರೀಯ ಹಿತಾಸಕ್ತಿಯೇ ಸರ್ವೋಚ್ಚವಾಗಿದೆ, ಆದರೆ ಕೆಲವರ ಪಾಲಿಗೆ ರಾಷ್ಟ್ರೀಯ ಹಿತಾಸಕ್ತಿಗಿಂತಲೂ ಪಕ್ಷದ ಹಿತಾಸಕ್ತಿಯೇ ಎಲ್ಲಕ್ಕಿಂತ ಹೆಚ್ಚಾದಾಗ, ಮಹಿಳಾ ಸಬಲೀಕರಣ ಮತ್ತು ರಾಷ್ಟ್ರೀಯ ಹಿತಾಸಕ್ತಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರಸ್ತಾವಿತ ತಿದ್ದುಪಡಿಯು ಸದ್ಯದ ಅಗತ್ಯವಾಗಿದೆ ಎಂದಿರುವ ಪ್ರಧಾನಿ ಮೋದಿ, ಮಹಿಳೆಯರಿಗೆ ನೀಡಿರುವ ಬದ್ಧತೆಯನ್ನು ಈಡೇರಿಸಲು ಸರ್ಕಾರ ದೃಢಸಂಕಲ್ಪ ಹೊಂದಿದೆ ಎಂದು ತಿಳಿಸಿದ್ದಾರೆ.
ನಾರಿ ಶಕ್ತಿ ವಂದನ್ ತಿದ್ದುಪಡಿ ಕಾಲದ ಬೇಡಿಕೆಯಾಗಿದ್ದು, ತಮ್ಮ ಸಂಕಲ್ಪ ಅಜೇಯವಾಗಿದೆ, ಅರ್ಧದಷ್ಟು ಜನಸಂಖ್ಯೆಯ ಕನಸುಗಳಿಗಾಗಿ ಮತ್ತು ತಮ್ಮ ರಾಷ್ಟ್ರದ ಭವಿಷ್ಯಕ್ಕಾಗಿ ಈ ಪ್ರತಿಜ್ಞೆಯನ್ನು ಈಡೇರಿಸಲೇಬೇಕು ಎಂದು ಅವರು ಹೇಳಿದ್ದಾರೆ.
ನವೆಂಬರ್ 30ರಂದು ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಮುನ್ನ ಈ ವಿಡಿಯೋ ಸಂದೇಶ ಬಂದಿದ್ದು, ಈ ವೇಳೆ ಕೇಂದ್ರ ಸರ್ಕಾರವು ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಪರಿಷ್ಕೃತ ಶಾಸನ ಪ್ರಸ್ತಾವನೆಗಳನ್ನು ಮಂಡಿಸುವ ನಿರೀಕ್ಷೆಯಿದೆ.




