
ಕೊಡಗು: ಕೃಷಿ ಕಾಯ್ದೆ ವಿರುದ್ಧ ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ : ಬ್ರಿಜೇಶ್ ಕಾಳಪ್ಪ
ಮಡಿಕೇರಿ ಡಿ.21 : ಕೇಂದ್ರದ ಕೃಷಿ ನೀತಿ ವಿರುದ್ಧ ದೇಶದ ವಿವಿಧ ರಾಜ್ಯಗಳ ರೈತರು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಕೊಡಗಿನ ಕೃಷಿಕರು ಕೂಡ ಕಾಯ್ದೆ ವಿರುದ್ಧ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ದೊಡ್ಡ ಅನಾಹುತವನ್ನೇ ಎದುರಿಸಬೇಕಾಗುತ್ತದೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನೋವನ್ನೆಲ್ಲಾ ನುಂಗಿಕೊಂಡು ಪ್ರಧಾನಿ ನರೇಂದ್ರಮೋದಿ ಅವರ ಪರವಾಗಿಯೇ ಪ್ರತಿಪಾದನೆ ಮಾಡಿದರೆ ಏನೂ ಪ್ರಯೋಜನವಿಲ್ಲ್ಲ. ಮಗು ಅತ್ತರಷ್ಟೇ ಹಾಲು ದೊರೆಯುತ್ತದೆ, ಆದ್ದರಿಂದ ಕೊಡಗಿನ ಬೆಳೆಗಾರರು ಹಾಗೂ ರೈತರು ಸರ್ಕಾರದ ನೀತಿಯಿಂದ ಅನುಭವಿಸುತ್ತಿರುವ ಸಂಕಷ್ಟದ ವಿರುದ್ಧ ಎದ್ದು ನಿಲ್ಲಬೇಕೆಂದು ಕರೆ ನೀಡಿದರು.
ಸಾಕಷ್ಟು ಕಷ್ಟ-ನಷ್ಟಗಳಿಂದ ಬೇಸತ್ತು ಕೊಡಗಿನ ಬೆಳೆಗಾರರು ತಮ್ಮ ಭೂಮಿಯನ್ನು ಮಾರಾಟ ಮಾಡುತ್ತಿದ್ದಾರೆ. ರೋಬಸ್ಟಾ ಕಾಫಿಯ ಬೆಲೆ ಕಳೆದ ಹದಿನೈದು ವರ್ಷಗಳಿಂದ ಏರಿಕೆಯನ್ನೇ ಕಂಡಿಲ್ಲ. ಕಾಫಿ ತೋಟದ ನಿರ್ವಹಣಾ ವೆಚ್ಚ ಅಧಿಕವಾಗಿದೆ. ಕಾಳು ಮೆಣಸು ಆಮದಿನಿಂದಾಗಿ ಬೆಲೆಯು ಕುಸಿದಿದೆ. ಕೋವಿಡ್ ಕಾರಣದಿಂದ ಪ್ರವಾಸೋದ್ಯಮವು ಹಿನ್ನಡೆಯನ್ನು ಅನುಭವಿಸಿದೆ. ಇಷ್ಟೆಲ್ಲಾ ತೊಂದರೆಗಳಿದ್ದರೂ ಸರ್ಕಾರ ಮಾತ್ರ ಕೊಡಗಿನ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಬ್ರಿಜೇಶ್ ಕಾಳಪ್ಪ ಆರೋಪಿಸಿದರು.
ಸರ್ಕಾರ ತಕ್ಷಣ ಆಮದು ಕ್ರಮವನ್ನು ನಿಲ್ಲಿಸಬೇಕು, ಆಮದಾಗುತ್ತಿರುವ ಬೆಳೆಯಿಂದ ನಷ್ಟವಾಗುತ್ತಿರುವುದರಿಂದ ಇಲ್ಲಿನ ಬೆಳೆಗಾರರು ಬೆಳೆದ ಬೆಳೆಗೆ ಸೂಕ್ತ ದರ ನಿಗಧಿ ಮಾಡಬೇಕು ಮತ್ತು ಆಮದು ವ್ಯವಹಾರದ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು.
ಈ ಮೂರು ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳದಿದ್ದಲ್ಲಿ ಯಾರದ್ದೋ ಲಾಭಕ್ಕಾಗಿ ತನ್ನ ನೀತಿಗಳನ್ನು ಮುಂದುವರೆಸುತ್ತಿದೆ ಎನ್ನುವ ಸಂಶಯ ವ್ಯಕ್ತವಾಗುತ್ತದೆ ಎಂದರು.
ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ ರೈತರ 72 ಸಾವಿರ ಕೋಟಿ ರೂ. ಸಾಲವನ್ನು ಮನ್ನಾ ಮಾಡಲಾಗಿದೆ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಇದ್ದಾಗ ಸಹಕಾರ ಸಂಘದಲ್ಲಿದ್ದ ರೈತರ ಸಾಲವನ್ನು ತಲಾ ಒಂದು ಲಕ್ಷ ರೂ. ಗಳಂತೆ ಮನ್ನಾ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು, ರೈತರ 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಆದರೆ ಈಗಿನ ಬಿಜೆಪಿ ನೇತೃತ್ವದ ಸರ್ಕಾರ ರೈತರ ಯಾವುದೇ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಬ್ರಿಜೇಶ್ ಕಾಳಪ್ಪ ಟೀಕಿಸಿದರು.
ದೆಹಲಿಯಲ್ಲಿ ಕೃಷಿ ನೀತಿ ವಿರೋಧಿಸಿ ವಿವಿಧ ರಾಜ್ಯದ ರೈತರು ನಡೆಸುತ್ತಿರುವ ಪ್ರತಿಭಟನೆ 26ನೇ ದಿನಕ್ಕೆ ಕಾಲಿಟ್ಟಿದ್ದು, ಅತಿಯಾದ ಚಳಿಯ ವಾತಾವರಣದಿಂದ ಇಲ್ಲಿಯವರೆಗೆ ಸುಮಾರು 30 ರೈತರು ಸಾವನ್ನಪ್ಪಿದ್ದಾರೆ. ಆದರೂ ಪ್ರಧಾನಮಂತ್ರಿಗಳು ಪ್ರತಿಭಟನಾ ನಿರತರೊಂದಿಗೆ ಚರ್ಚಿಸದೆ ಪ್ರತಿಭಟನೆಯೇ ನಡೆಯದ ಪ್ರದೇಶಗಳಿಗೆ ತೆರೆಳಿ ರೈತ ಸಮಾಲೋಚನೆ ನಡೆಸುತ್ತಿದ್ದಾರೆ. ಪಕ್ಕದಲ್ಲೇ ಇರುವ ಪ್ರತಿಭಟನಾ ನಿರತ ರೈತರ ಗೋಳನ್ನು ಪ್ರಧಾನಮಂತ್ರಿಗಳು ಆಲಿಸುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.
ಪ್ರತಿಭಟನೆ ಮಾಡುವ ರೈತರನ್ನು ಉಗ್ರರು, ನಕ್ಷಲರು, ಎಡಪಂಥೀಯರು ಎಂದೆಲ್ಲ ಹೀಯಾಳಿಸುವ ಕ್ರಮ ಖಂಡನೀಯ ಎಂದು ಬ್ರಿಜೇಶ್ ಕಾಳಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ, ಸರ್ಕಾರದ ಧೋರಣೆಗಳ ವಿರುದ್ಧ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸುತ್ತಲೇ ಬಂದಿದೆ. ಆದರೆ ಎಮ್ಮೆ ಚರ್ಮದ ಸರ್ಕಾರ ದರ್ಪದಿಂದ ಮೆರೆಯುತ್ತಿದೆ ಎಂದು ಆರೋಪಿಸಿದರು.
ಜಿಲ್ಲೆಯ ಸಂಸದರು ಹಾಗೂ ಶಾಸಕರು ಬೆಳೆಗಾರರ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ದೇಶ ಮತ್ತು ರಾಜ್ಯದಲ್ಲಿ ವಿರೋಧ ಪಕ್ಷಗಳಿಗೆ ಮಾನ್ಯತೆ ಇಲ್ಲದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೊಟ್ಟೆಯಂಡ ಪಾರ್ವತಿ ಫ್ಯಾನ್ಸಿ, ಯುವ ಕಾಂಗ್ರೆಸ್ ನಗರಾಧ್ಯಕ್ಷ ಸದಾಮುದ್ದಪ್ಪ ಹಾಗೂ ಪ್ರಮುಖರಾದ ಉದಯ ಕುಮಾರ್ ಉಪಸ್ಥಿತರಿದ್ದರು.
::: ಪೋರ್ಕ್ ಎಂದು ಹೇಳಲು ಹೋಗಿ ಬೀಫ್ ಆಗಿದೆ :::
“ಕೊಡವರು ಪೋರ್ಕ್ ತಿನ್ನುತ್ತಾರೆ ಎಂದು ಹೇಳಲು ಹೋಗಿ ಬಾಯಿ ತಪ್ಪಿನಿಂದ ಬೀಫ್ ಆಗಿದೆ” ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಯಿತಪ್ಪಿ ಬೀಫ್ ಎಂದು ಸಿದ್ದರಾಮಯ್ಯ ಅವರು ಹೇಳಿ ಬಿಟ್ಟಿದ್ದಾರೆ, ತಪ್ಪುಗಳು ಆಗುವುದು ಸಹಜ. ಅದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಬಹಿರಂಗ ಕ್ಷಮೆಯಾಚನೆಗೆ ಎಲ್ಲಾ ಕೊಡವರು ಕೇಳುತ್ತಿಲ್ಲ, ಗ್ರಾ.ಪಂ ಚುನಾವಣೆಯನ್ನು ಗುರಿಯಾಗಿಸಿಕೊಂಡು ಕೆಲವರು ಕೇಳುತ್ತಿದ್ದಾರೆ ಅಷ್ಟೇ. ಈಗಾಗಲೇ ಸಿದ್ದರಾಮಯ್ಯ ಅವರು ವಿಷಾದ ವ್ಯಕ್ತಪಡಿಸಿ ಆಗಿದೆ ಎಂದು ಬ್ರಿಜೇಶ್ ಕಾಳಪ್ಪ ತಿಳಿಸಿದರು.




