Crime

ಕೋವಿಡ್: ಕೊನೆಗೊಳ್ಳದ ಕರಾಳ ನೆನಪು..

ಬೀದರ್: ಆತ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಚಟುವಟಿಕೆಯ ಮೂಲಕ ಹೆಸರು ಮಾಡಿದಾತ. ವಯಸ್ಸು ಹೆಚ್ಚೆಂದರೆ 40 ಇದ್ದಿರಬಹುದು. ವಿವಾಹಿತ. ಮೂರು ಪುಟ್ಟ ಮಕ್ಕಳು. ಸುಖೀ ಸಂಸಾರ. ಆಗಸ್ಟ್ ಕೊನೆಯಲ್ಲಿ ಸ್ವಲ್ಪ ಜ್ವರ ಕಾಣಿಸಿಕೊಂಡಿತು. ಸಾಮಾನ್ಯ ಜ್ವರ ಇದ್ದಿರಬಹುದು ಎಂದುಕೊಂಡಿದ್ದ. ಗುಳಿಗೆ ತೆಗೆದುಕೊಂಡರೂ ಕಮ್ಮಿಯಾಗಲಿಲ್ಲ. ಕೋವಿಡ್ ಟೆಸ್ಟ್ ಮಾಡಿಸಿಕೊಂಡ. ವರದಿ ಪಾಸಿಟಿವ್ ಬಂದಿತು. ಅದರೊಂದಿಗೆ ಬದುಕೂ ಕೊನೆಗೊಂಡಿತು. ಕಷ್ಟ, ಸುಖದಲ್ಲಿ ಸಮಾನ ಭಾಗಿಯಾಗಿದ್ದ ಮಡದಿ ಮಕ್ಕಳೂ ಅಂತಿಮ ದರ್ಶನ ಪಡೆಯಲಾಗಲಿಲ್ಲ. ಸುರಕ್ಷಾ ಕಿಟ್ ಧರಿಸಿದ್ದ ಆರೋಗ್ಯ ಇಲಾಖೆ ಸಿಬ್ಬಂದಿಯೇ ಅಂತ್ಯಕ್ರಿಯೆ ನೆರವೇರಿಸಿದರು. ಮನೆಯವರು ದೂರದಲ್ಲಿ ನಿಂತು ಕಣ್ಣೀರು ಹಾಕಿದರು.
`ಹುಟ್ಟು’ ಒಂದು ಸಂಭ್ರಮದ ಘಳಿಗೆ. ಈ ಸಂಭ್ರಮಕ್ಕೆ ಜಾತಿ, ಮತ, ಲಿಂಗ, ಅಂತಸ್ತು ಹೀಗೆ ಯಾವುದೇ ಭೇದ ಇರಲಾರದು. ಸಾವು ದು:ಖದ ಸಂಗತಿ ಆಗಿದ್ದರೂ ಅದಕ್ಕೆಂದೇ ಇರುವ ರೀತಿ ರಿವಾಜುಗಳನ್ನು ಎಲ್ಲರೂ ಪಾಲಿಸುತ್ತಾರೆ. ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸುತ್ತಾರೆ. ಆದರೆ, ಕರಾಳ ಕೋವಿಡ್ ಇವೆಲ್ಲವಕ್ಕೆ ಅಡ್ಡಿಯಾಯಿತು. ಅಂತ್ಯಸಂಸ್ಕಾರದಲ್ಲಿ ಭಾಗಿಯಾಗದ, ಕೊನೆಯ ಬಾರಿ ಮುಖ ನೋಡಲೂ ಆಗದ ನೋವು – ಅದೂ ಜೀವನ ಪರ್ಯಂತ ಕಾಡುವ ನೋವು- ನೀಡಿದ್ದು ಕೋವಿಡ್. ಪ್ರೀತಿಪಾತ್ರರನ್ನು ಉಳಿಸಿಕೊಳ್ಳಲಾಗದ, ಕೊನೆ ಕ್ಷಣದ ವಿಧಿವಿಧಾನಗಳನ್ನು ನೆರವೇರಿಸದ ನೋವು ಅಸಹನೀಯ. ನೆನಪು ಬಂದಾಗೊಮ್ಮೆ ಜೀವಹಿಂಡಿದಂತಾಗುತ್ತದೆ.
ಇದೇ ಕೋವಿಡ್‍ನಿಂದ ಬಸವಕಲ್ಯಾಣದ ಶಾಸಕ ಬಿ. ನಾರಾಯಣರಾವ್ ಕೊನೆಯುಸಿರೆಳೆದಿದ್ದು ದು:ಖದ ಸಂಗತಿ. ಲಾಕ್‍ಡೌನ್ ಅವಧಿಯಲ್ಲಿ ಬಿ. ನಾರಾಯಣರಾವ್ ಅವರು ಸಹಸ್ರಾರು ಪರಿವಾರಗಳಿಗೆ ನೆರವಾಗಿದ್ದರು. ಕೋವಿಡ್ ಕಷ್ಟ ಕಮ್ಮಿ ಮಾಡಲು ಶ್ರಮಿಸಿದ್ದರು. ಆದರೆ, ಅದೇ ಕೋವಿಡ್‍ನಿಂದ ನಾರಾಯಣರಾವ್ ಅವರನ್ನು ಉಳಿಸಿಕೊಳ್ಳುವುದು ಸಾಧ್ಯವಾಗಲಿಲ್ಲ.
2020 ನೇ ಸಾಲು ದು:ಖದ ನೆನಪುಗಳೊಂದಿಗೆ ಕಾಲಗರ್ಭದಲ್ಲಿ ಸೇರಿದೆ. ಆದರೆ, ಕೋವಿಡ್ ಕರಾಳ ನೆನಪುಗಳು ಕೊನೆಗೊಂಡಿಲ್ಲ. ಹೊಸ ವರ್ಷ 2021 ರಲ್ಲೂ ಕೋವಿಡ್ ಕಾಟ ಮುಂದುವರೆಯಲಿದೆ. ರೂಪಾಂತರಗೊಂಡಿರುವ ಕೋರೊನಾ ವೈರಸ್ ಭೀತಿ ಈಗಾಗಲೇ ಶುರುವಾಗಿದೆ.
ಇನ್ನು ಬೀದರ್ ಜಿಲ್ಲೆಯಲ್ಲಿ 2020 ರಲ್ಲಿ ಆಗಿರುವ ಕೆಲಸ ಕಾರ್ಯಗಳ ಪಟ್ಟಿ ದೊಡ್ಡದೇನಿಲ್ಲ. ಆಗದೇ ಇರುವ ಕೆಲಸಗಳೇ ಹೆಚ್ಚಿವೆ. ನಾಗರಿಕ ವಿಮಾನಯಾನ ಆರಂಭವಾಗಿದ್ದನ್ನು ಹೊರತುಪಡಿಸಿದ್ದಲ್ಲಿ ಬೇರಾವ ಕೆಲಸವೂ ಕಣ್ಣಿಗೆ ಕಾಣುವಷ್ಟು ದೊಡ್ಡದಾಗಿಲ್ಲ.
ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣ ಇದ್ದಲ್ಲಿಯೇ ಇದೆ. ಪ್ರವಾಸೋದ್ಯಮ ವಿಕಾಸಕ್ಕೆ ಚಾಲನೆ ದೊರೆತಿಲ್ಲ. ಬಹಮನಿ ಕಾಲದ ಕರೇಜ್‍ಗೆ ಕಾಯಕಲ್ಪ ನೀಡುವುದು ಸಾಧ್ಯವಾಗಿಲ್ಲ.
ಕೈಗಾರಿಕೆ ಸ್ಥಾಪನೆ ಮತ್ತು ಉದ್ಯೋಗ ಸೃಷ್ಟಿ ಆಗಿಲ್ಲ. ಅತಿವೃಷ್ಟಿಯಿಂದಾಗಿ ಕಾರಂಜಾ ಭರ್ತಿಯಾಗಿ, ಅಚ್ಚುಕಟ್ಟು ಪ್ರದೇಶದ ರೈತರು ಸ್ವಲ್ಪ ಖುಷಿಪಟ್ಟಿರಬಹುದು. ಆದರೆ, ಅದಕ್ಕೂ ಹೆಚ್ಚು ರೈತರು ಮಳೆಯಿಂದಾಗಿ ಬೆಳೆ ಕಳೆದುಕೊಂಡು ಕಷ್ಟಕ್ಕೀಡಾಗಿದ್ದಾರೆ.
ಬೀದರ್ ಸಹಕಾರ ಸಕ್ಕರೆ ಕಾರಖಾನೆಗೆ ಮರುಜೀವ ನೀಡುವ ಕೆಲಸ ನಡೆದಿಲ್ಲ. ಬಸವಕಲ್ಯಾಣದ ಅನುಭವ ಮಂಟಪ ನಿರ್ಮಾಣಕ್ಕೆ ಚಾಲನೆ ಕೊಡುವುದೂ ಆಗಲಿಲ್ಲ.
ಹೀಗೆ ಆಗಿಲ್ಲದ ಕೆಲಸ ಕಾರ್ಯಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹೊಸ ವರ್ಷ ಕೋವಿಡ್‍ನೊಂದಿಗೆಯೇ ಶುರುವಾಗಿದೆ. 2020 ರ ನೋವಿನ ಘಟನೆಗಳು 2021 ರಲ್ಲಿ ಮರುಕಳಿಸದಿರಲಿ ಎಂದು ಹಾರೈಸುವುದನ್ನು ಬಿಟ್ಟು ಬೇರೇನೂ ಮಾಡದಂತಹ ಸ್ಥಿತಿ ಈಗಿದೆ. ಆದರೂ, ಉತ್ತಮ ದಿನಗಳ ನಿರೀಕ್ಷೆ ಇದೆ, ನಾಳಿನ ಹೊಸ ಬೆಳಕು ಕಷ್ಟ ಕಾರ್ಪಣ್ಯಗಳ ಕತ್ತಲೆಯನ್ನು ಹೊಡೆದೋಡಿಸಬಹುದೆಂಬ ವಿಶ್ವಾಸವೂ ಇದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button