Featured StoryVijayapura

ಟಿಪ್ಪು ಪರಂಪರೆಯನ್ನು ಕಾಂಗ್ರೆಸ್ ಮುಂದುವರೆಸುತ್ತಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ವಿಜಯಪುರ : ಈ ಹಿಂದೆ ಟಿಪ್ಪು ಸುಲ್ತಾನ್ ಅಪ್ಘಾನಿಸ್ತಾನಕ್ಕೆ ಪತ್ರ ಬರೆದು ಸಹಾಯ ಕೇಳಿದ್ದ, ಈಗ ಅದೇ ಪರಂಪರೆಯನ್ನು ಕಾಂಗ್ರೆಸ್ ನಾಯಕರು ಮುಂದುವರೆಸಿದ್ದು, ವಿದೇಶಿ ನೆಲದಲ್ಲಿ ನಿಂತು ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಬಂದು ಅಭಯ ನೀಡಿ ಎಂದು ಕೇಳಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.


ವಿಜಯಪುರದ ಸೈನಿಕ ಶಾಲೆಯಲ್ಲಿ ಜರುಗಿದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಸಂಸದರೊಬ್ಬರು ದೇಶದಲ್ಲಿ ಪ್ರಜಾಪ್ರಭುತ್ವ ಗಂಡಾಂತರ ಪರಿಸ್ಥಿತಿ ಇದೆ ಎಂದು ಭಾಷಣ ಮಾಡಿದ್ದಾರೆ. ಈ ಹಿಂದೆ ಟಿಪ್ಪು ಸುಲ್ತಾನ ಸಹ ಅಪ್ಘಾನಿಸ್ತಾನ ದೇಶಕ್ಕೆ ಪತ್ರ ಬರೆದು ಭಾರತದಲ್ಲಿ ಧಂಗೆ ಮಾಡಿ ಎಂದು ಹೇಳಿದ್ದ, ಈಗ ಅದೇ ನೀತಿಯನ್ನು ಕಾಂಗ್ರೆಸ್ಸಿಗರು ಅನುಸರಿಸುತ್ತಿದ್ದಾರೆ ಎಂದರು. ಅದೇ ತೆರನಗಿ ಕಾಂಗ್ರೆಸ್ ಹಿರಿಯ ನಾಯಕನೊಬ್ಬ ಪಾಕ್ಗೆ ಹೋಗಿ ಅಲ್ಲಿನ ಜನರನ್ನುದ್ದೇಶಿಸಿ ನೀವು ಭಾರತಕ್ಕೆ ಬಂದು ಮೋದಿ ಸೋಲಿಸಿ ಎಂದು ಕರೆ ನೀಡುತ್ತಾರೆ ಎಂದರು.


ಸಿಮಿ, ಐಎಸ್ಐ ಮೊದಲಾದ ಭಯೋತ್ಪಾದಕ ಸಂಘಟನೆಗಳೊಂದಿಗೆ ಪಿಎಫ್ಐನಂತಹ ಸಂಘಟನೆಗಳು ಒಡನಾಟ ಹೊಂದಿವೆ, ಇದಕ್ಕೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ ಎಂದರು.


ಭಯೋತ್ಪಾದನೆ ಮಟ್ಟ ಹಾಕಿದ್ದು ಬಿಜೆಪಿ, ಪಾಕ್ ಒಳಗೆ ಹೊಕ್ಕು ಬುದ್ದಿ ಕಲಿಸಿದ್ದು ಕೇಂದ್ರದ ಬಿಜೆಪಿ ರ್ಕಾರ ಎಂದರು.

ಕಾಂಗ್ರೆಸ್ ಡೇಟ್ ಡಿಬಾರ್…..
ಸಿದ್ದರಾಮಯ್ಯ ಅವರಿಗೆ ಅಚ್ಚೇದಿನ ಬರುವುದಿಲ್ಲ, ಅವರ ಪಕ್ಷದ ಡೇಟ್ ಬಾರ್ ಆಗಿದೆ, ದೇಶದ ಜನರಿಗೆ ಅಚ್ಚೇದಿನ ಬಂದಿವೆ ಎಂದು ಜೋಶಿ ವ್ಯಂಗ್ಯವಾಡಿದರು.
ಡಿಬಿಟಿ ಮೂಲಕ ಜನರ ಕೋಟಿ ಕೋಟಿ ಹಣ ಕೆಲವು ವ್ಯಕ್ತಿಗಳ ಪಾಲಾಗುವುದು ತಪ್ಪಿತು, ಯಾವ ಜೇಬಿಗೆ ಹಣ ಹೋಗುವುದು ಬಂದ್ ಆಗಿದೆಯೋ ಅವರು ಮೋದಿ ಅವರನ್ನು ತೆಗಳುತ್ತಾರೆ ಎಂದರು.
ಕೋವಿಡ್ ವ್ಯಾಕ್ಸೀನ್ ತಯಾರು ಆಗದೇ ಹೋಗಿದ್ದರೆ ಸಾವಿರಾರು ರೂ. ನೀಡಿ ಒಂದು ಡೋಸ್ ಲಸಿಕೆ ಅಮೇರಿಕೆ, ರಷ್ಯಾದಿಂದ ಖರೀದಿಸಬೇಕಿತ್ತು, ಮಾಸ್ಕ ಇಲ್ಲದೇ ಇಂದು ಸುರಕ್ಷಿತವಾಗಿ ಬದುಕುವಂತಾಗಿದೆ ಎಂದರು.
ನಾಲ್ಕು ಕೋಟಿ ಜನಸಂಖ್ಯೆ ಇರುವ ಶ್ರೀಮಂತ ರಾಷ್ಟ್ರಕ್ಕೆ ಭೇಟಿ ನೀಡಿದಾಗ ೨೦೦ ಕೋಟಿ ಡೋಸ್ ನೀಡಿದ ವಿಷಯ ಕೇಳಿ ಅವರಿಗೆ ತಲೆ ಕೆಟ್ಟು ಹೋಗಿತ್ತು, ಆ ದೇಶದಲ್ಲಿ ಕೇವಲ ೨ ಕೋಟಿ ಜನರಿಗೆ ಮಾತ್ರ ವ್ಯಾಕ್ಸಿನ್ ತಲುಪಿಸಲು ಸಾಧ್ಯವಾಗಿತ್ತು ಎಂದರು.
ಇಂದು ನಾವು ಸುರಕ್ಷಿತವಾಗಿ ಜೀವನ ನಡೆಸಲು ಸಾಧ್ಯವಾಗಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಪರಿಶ್ರಮದಿಂದ ಎಂದರು.
ವಿರೋಧ ಪಕ್ಷಗಳು ನಿರಾರಕರಿಸಲು ಸಾಧ್ಯವಿಲ್ಲದಷ್ಟು ಯೋಜನೆಗಳ ಲಾಭ ತಟ್ಟಿವೆ. ನೀರು ಕೊಡುವ ಜವಾಬ್ದಾರಿ ಗ್ರಾ.ಪಂ, ಅದಕ್ಕೆ ಅನುದಾನ ಕೊಡುವುದು ರಾಜ್ಯ ಸರ್ಕಾರ, ಆದರೆ ಪ್ರಧಾನಿ ಅವರು ಪ್ರತಿ ಹಳ್ಳಿಗೂ ನೀರು ಮನೆ ಮನೆಗೆ ತಲುಪಬೇಕು ಎಂಬ ದೂರದೃಷ್ಟಿ, ವಿಜಯಪುರ ಜಿಲ್ಲೆಗೆ ೪ ಸಾವಿರ ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಪ್ರತಿ ಮನೆಗೆ ನಳದ ಮೂಲಕ ನದಿ ನೀರು ತಲುಪಿಸಿದ್ದು ಮೋದಿ ಅವರು ಎಂದರು.


ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ 3.23 ಕೋಟಿ ಮನೆಗಳಿಗೆ ಮಾತ್ರ ನಳದ ಸಂಪರ್ಕವಿತ್ತು, ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 11.45 ಕೋಟಿ ಮನೆಗಳಿಗೆ ನಳದ ಸಂಪರ್ಕ ಕಲ್ಪಿಸಲಾಗಿದ್ದು, 2025-26 ರ ಹೊತ್ತಿಗೆ ದೇಶದ ಪ್ರತಿ ಮನೆಗೂ ನಳದ ಸಂಪರ್ಕ ಕಲ್ಪಿಸುವ ದೊಡ್ಡ ಗುರಿ ಹೊಂದಲಾಗಿದೆ ಎಂದರು.


ಜನಧನ ಅಕೌಂಟ್ ಏನು ಮಹಾ ಎಂದು ವಿರೋಧಿಗಳು ನಗೆಯಾಡಿದ್ದರು, ಆದರೆ ಈ ಯೋಜನೆ ಘೋಷಣೆಯಾದ ನಂತರ 42 ಕೋಟಿ ಹೊಸ ಖಾತೆ ಸೃಜಿಸಿದವು, ಈ ಹಿಂದೆ ಆಧಾರ್ ಆಧಾರ ಇರಲಿಲ್ಲ, ಈ ಕಾರ್ಡಗೆ ಆಧಾರ್ ಕಲ್ಪಿಸಿದ್ದು ಮೋದಿ ಅವರು ಎಂದರು.
ದಿಲ್ಲಿಯಿಂದ 100 ಹಾಕಿದರೆ ಅದು ವಿಜಯಪುರ ತಲುಪಲು 15 ರೂ. ಆಗುತ್ತದೆ ಎಂದು ದಿ.ರಾಜೀವಗಾಂಧೀ ಹೇಳಿದ್ದರು. ಆದರೆ ಈಗ ಮೋದಿ ಅವರ ದೂರದೃಷ್ಟಿಯಿಂದ ಆಧಾರ್, ಬ್ಯಾಂಕ್ ಲಿಂಕ್ ಮೂಲಕ 100 ರೂ. ಯಾವ ಮೂಲೆಗೂ ಅಷ್ಟೇ ಮೌಲ್ಯದಲ್ಲಿ ತಲುಪುತ್ತದೆ ಎಂದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button