
ಬಿಜೆಪಿಯ ಭದ್ರಕೋಟೆ ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಹವಾ – ಕೇಸರಿ ಪಾಳಯದ ಎಡವಟ್ಟು ಏನು ಗೊತ್ತಾ!
ಉಡುಪಿ: ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಯಾರೂ ನಿಂತರೂ ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಗೆಲುವು ಸುಲಭ ಎಂಬ ಮಾತಿತ್ತು. ನಂತರ ಮೋದಿ ಹವಾ, ಹಿಂದುತ್ವದ ಅಲೆಗೆ ಮಾರು ಹೋಗಿದ್ದ ಜನ ಉಡುಪಿ ಜಿಲ್ಲೆಯ ಐದು ಕ್ಷೇತ್ರವನ್ನು ಬಿಜೆಪಿಯ ಭದ್ರ ಕೋಟೆಯಾಗಿ ಬದಲಾಯಿಸಿದ್ದರು. ಕರ್ನಾಟಕ ವಿಧಾನ ಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿ ಪಕ್ಷಗಳು ಅಭ್ಯರ್ಥಿ ಘೋಷಿಸುವರೆಗೆ ಬಿಜೆಪಿಯ ಭದ್ರ ಕೋಟೆಯಾಗಿದ್ದ ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳು ಮತದಾನ ಹತ್ತಿರವಾಗುತ್ತಿರುವಾಗಲೇ ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆಕಾಯಿಯಾಗಿ ಬದಲಾಗಿದೆ.
ಈ ರೀತಿಯ ತಕ್ಷಣದ ಬದಲಾವಣೆಗೆ ಹಲವು ಕಾರಣ ಇದ್ದರೂ ಬಿಜೆಪಿಯ ಹೈಕಮಾಂಡ್’ನ ಕೆಲವೊಂದು ಅಪ್ರಬುದ್ಧ ನಿರ್ಣಯಗಳು ಕೂಡ ಈ ಕಠಿಣತೆಗೆ ಕಾರಣ ಎನ್ನಲಾಗುತ್ತಿದೆ. ಬಿಜೆಪಿ ಮತದಾನದ ನಂತರ ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂದು ಕೊಂಡರೂ ಕೂಡ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ನೆಮ್ಮದಿಯಿಂದ ಮಲಗುವಂತಹ ವಾತಾವರಣ ಖಂಡಿತ ಇಲ್ಲ.
ಪ್ರಬಲ ಅಭ್ಯರ್ಥಿಗಳ ಕೊರತೆಯಿಂದ ಬಳಲುತ್ತಿದ್ದ ಕಾಂಗ್ರೆಸ್ ಇದೀಗ ಜಿಲ್ಲೆಯಲ್ಲಿ ಪೈಪೋಟಿ ನೀಡ ಬಲ್ಲ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿ ಗೆಲ್ಲುವ ಕುದುರೆಗಳನ್ನು ಕಣದಿಂದ ಸರಿಸಿ ಪ್ರಯೋಗಕ್ಕೆ ಮುಂದಾಗಿದೆ. ಕರಾವಳಿ ಹಿಂದುತ್ವದ ಪ್ರಯೋಗಶಾಲೆ ಎನ್ನಲಾಗುತ್ತದೆ. ಇದನ್ನು ಅಕ್ಷರಶಃ ನಿಜ ಮಾಡಲು ಹೊರಟಿರುವ ಬಿಜೆಪಿಗೆ ಈ ಬಾರಿ ಐದು ಕ್ಷೇತ್ರಗಳಲ್ಲಿ ಯಾವ ರೀತಿಯ ಫಲಿತಾಂಶ ಲಭ್ಯವಾಗಲಿದೆ ಎಂಬುದರ ಕುರಿತು ಗಮನ ಹರಿಸೋಣ.
ಉಡುಪಿ ಕ್ಷೇತ್ರ:
ಸದ್ಯಕ್ಕೆ ಬಿಜೆಪಿ ಉಡುಪಿ ಕ್ಷೇತ್ರಲ್ಲಿ ಬಲಿಷ್ಠ ಆಗಿ ಕಂಡರೂ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಯಶ್ಫಾಲ್ ಸವರ್ಣರಿಗೆ ಗೆಲುವು ಸುಮ್ಮನೆ ಧಕ್ಕುದಿಲ್ಲ ಎಂಬ ಸತ್ಯ ಮನವರಿಕೆಯಾಗಿದೆ. ದೊಡ್ಡ ಮಟ್ಟದ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಈ ಕ್ಷೇತ್ರದಲ್ಲಿ ಒಮ್ಮೆ ಗೆದ್ದರೆ ಸಾಕು ಎಂಬ ಸ್ಥಿತಿ ಉಂಟಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಕಾಂಚನ್ ತೀವ್ರ ಪೈಪೋಟಿ ನೀಡಲು ಸಡ್ಡು ಹೊಡೆದು ನಿಂತಿದ್ದಾರೆ. ಕಳೆದ ಬಾರಿಯ ಲೆಕ್ಕಚಾರ ನೋಡಿದರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ 12 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರೂ ಇದಕ್ಕೆ ಮುಖ್ಯ ಕಾರಣ ಹಿಂದುತ್ವ ಅಲೆ. ಆದರೆ ಈ ಬಾರಿ ಆ ಅಲೆ ಮಾಸಿ ತಣ್ಣಗಾಗಿದೆ. ಬಿಲ್ಲವ, ಬಂಟರ ಸಮುದಾಯದ ಮತಗಳು ಸ್ವಲ್ಲವೂ ಷೇಕ್ ಆದರೆ ಬಿಜೆಪಿಗೆ ಸೋಲು ಗ್ಯಾರಂಟಿ. ಪ್ರಸಾದ್,ಯಶ್ಫಾಲ್ ಮೊಗವೀರ ಅಭ್ಯರ್ಥಿಯಾಗಿರುವುದರಿಂದ ದೊಡ್ಡ ಮಟ್ಟದ ಮತ ಬಿಜೆಪಿಗೆ ಹೋದರು ಕಳೆದ ಬಾರಿಗಿಂತ ಹೆಚ್ಚಿನ ಮತ ಈ ಸಮುದಾಯದಿಂದ ಕಾಂಗ್ರೆಸ್’ಗೆ ಹರಿದು ಬರಲಿದೆ. ಇನ್ನು ಈ ಬಾರಿ ಬ್ರಾಹ್ಮಣ, ಜಿ.ಎಸ್.ಬಿ ಮತಗಳು ಕೂಡ ಬಿಜೆಪಿಯೊಂದಿಗೆ ಕಣ್ಣಾ ಮುಚ್ಚಾಲೆಯಾಡುವ ಸಾಧ್ಯತೆಯೇ ಹೆಚ್ಚು. ರಘುಪತಿ ಭಟ್ ಹಾಕಿರುವ ಕಣ್ಣೀರು ಅಷ್ಟು ಸುಲಭದಲ್ಲಿ ಈ ಸಮುದಾಯ ಮರೆತಿರಬಹುದೇ? ಎಂದು ಊಹಿಸಲು ಸಾಧ್ಯವೇ..! ಖಂಡಿತ ಇಲ್ಲ. ಕಾಂಗ್ರೆಸ್’ಗೆ ಗಾಡ್ ಗಿಫ್ಟ್ ಮುಸ್ಲಿಮರ ಮತ್ತು ಕ್ರೈಸ್ತರ ಮತಗಳು ಅವು ಗಂಟಾಗಿ ಕಾಂಗ್ರೆಸ್ ತೆಕ್ಕೆಗೆ ಪಕ್ಕ. ಇನ್ನು ದುಬಾರಿಗೊಂಡ ವಸ್ತುಗಳ ಬೆಲೆಗಳ ಕಾರಣಕ್ಕಾಗಿ ಎಲ್ಲ ಸಮುದಾಯದ ಬಹು ಸಂಖ್ಯಾತ ಮಹಿಳೆಯರು ಖೋತಾ, ಖೋತಾ ಕುದಿಯುತ್ತಿದ್ದಾರೆ. ಈ ಸನ್ನಿವೇಶದಲ್ಲಿ ಕಾಂಗ್ರೆಸ್ ಗ್ಯಾರಂಟಿಗೆ ಮಾರು ಹೋಗಿ ಕೈಗೆ ಗ್ರೀನ್ ಸಿಗ್ನಲ್ ನೀಡಿದರೆ ಬಿಜೆಪಿಗೆ ಸಖತ್ ಕಷ್ಟವಿದೆ. ಒಟ್ಟಿನಲ್ಲಿ ಈ ಬಾರಿ ಬಿಜೆಪಿ ಕಾಂಗ್ರೆಸ್’ನಲ್ಲಿ ಪ್ರಬಲ ಅಭ್ಯರ್ಥಿಯಿಲ್ಲ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸುತ್ತೇವೆ ಎಂದುಕೊಂಡು ಯಾಮಾರಿದರೆ ಮೇ 13 ರಂದು ಮುಖ ತೋರಿಸದ ಸ್ಥಿತಿ ನಿರ್ಮಾಣವಾಗುವ ಹಂತದಲ್ಲಿದೆ ಉಡುಪಿ ಕ್ಷೇತ್ರ! .
ಇನ್ನು ಯಶ್ಫಾಲ್ ಸುವರ್ಣ ಮತ್ತು ಪ್ರಸಾದ್ ಕಾಂಚನ್ ನಡುವೆ ಶ್ರೈಕ್ಷಣಿಕ ಅರ್ಹತೆಯ ಕುರಿತು ಚರ್ಚೆಗಳು ನಡೆಯುತ್ತಿವೆ. ಇನ್ನೊಂದು ಕಡೆ ವಿವಾದಗಳನ್ನು ಮೈ ತುಂಬಾ ಎಳೆದುಕೊಂಡಿರುವ ಯಶ್ಫಾಲ್ ಸುವರ್ಣ ಜಿಲ್ಲೆಯಲ್ಲಿ ವಿವಾದಗಳ ಕಾರಣಕ್ಕಾಗಿಯೇ ಪರಿಚಿತರು. ಈ ವಿವಾದ, ವಿವಾದಾತ್ಮಕ ಹೇಳಿಕೆಗಳನ್ನು ಮೆಚ್ಚಿಕೊಂಡು ಜನ ಬೆಂಬಲ ಸಿಗಬಹುದೇ ಎಂಬುದರ ಕುರಿತು ಕಾದು ನೋಡಬೇಕಾಗಿದೆ. ಇನ್ನು ಪ್ರಸಾದ್ ಕಾಂಚನ್ ಚಿರಪರಿಚಿತವಲ್ಲದ ಮುಖ. ಸಕ್ರಿಯ ರಾಜಕಾರಣದಲ್ಲಿ ಇದೇ ಮೊದಲು ಎಂಬಂತೆ ಧುಮುಕಿದ್ದಾರೆ. ಆದರೆ ಅವರ ತಾಯಿಯ ವರ್ಚಸ್ಸು ಅವರ ಕೈ ಹಿಡಿಯ ಬಹುದೇ ಎಂಬುದು ಮುಖ್ಯ. ಬಿಜೆಪಿ ಮುಖಂಡರು ಪ್ರಸಾದ್ ಕಾಂಚನ್ ರನ್ನು ದುರ್ಬಲ ಅಭ್ಯರ್ಥಿಯೆಂದು ಬಿಂಬಿಸುತಲೇ ಅವರ ಕುರಿತು ತಲೆಗೆಡಿಸಿಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟ!
ಇಬ್ಬರೂ ಹೊಸಬರಾದ ಕಾರಣ ಕ್ಷೇತ್ರದಲ್ಲಿ ತಮ್ಮದೇ ಹಿಡಿತ ಹೊಂದಿಲ್ಲ. ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಒಟ್ಟಿಗೆ ಇರುವುದು ಬಿಜೆಪಿ ಗೆ ಪ್ಲಸ್. ಕಾಂಗ್ರೆಸ್ ನಾಯಕಿ ಸರಳಾ ಕಾಂಚನ್ ಅವರು ಬ್ರಹ್ಮಾವರ ಭಾಗದಲ್ಲಿ ತಮ್ಮದೇ ಪ್ರಭಾವ ಹೊಂದಿರುವುದು ಕಾಂಗ್ರೆಸ್ ಅಭ್ಯರ್ಥಿಗೆ ಸಹಕಾರಿಯಾಗಬಹುದು. ಎರಡೂ ಪಕ್ಷಗಳು ತಮ್ಮದೇ ಸಾಂಪ್ರದಾಯಿಕ ಮತಗಳನ್ನು ಹೊಂದಿವೆ. ಬಿಜೆಪಿ ಅಭಿವೃದ್ಧಿ, ಹಿಂದುತ್ವ ಎನ್ನುತಿದ್ದರೆ, ಕಾಂಗ್ರೆಸ್ ವಿದ್ಯಾವಂತ ಅಭ್ಯರ್ಥಿ, ಸರಕಾರ ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು ಪ್ರಚಾರದಲ್ಲಿ ನಿರತವಾಗಿದೆ.
ಕಣದಲ್ಲಿರುವ ಅಭ್ಯರ್ಥಿಗಳು 7
- ಯಶ್‌ಪಾಲ್ ಎ. ಸುವರ್ಣ (ಬಿಜೆಪಿ)
- ಪ್ರಸಾದ್ ರಾಜ್ ಕಾಂಚನ್(ಕಾಂಗ್ರೆಸ್)
- ದಕ್ಷತ್ ಶೆಟ್ಟಿ (ಜೆಡಿಎಸ್)
- ಪ್ರಭಾಕರ ಪೂಜಾರಿ (ಎಎಪಿ)
- ನಿತಿನ್ ವಿ. ಪೂಜಾರಿ (ಉತ್ತಮ ಪ್ರಜಾಕೀಯ ಪಕ್ಷ)
- ರಾಮದಾಸ ಭಟ್ (ಕರ್ನಾಟಕ ರಾಷ್ಟ್ರ ಸಮಿತಿ)
- ಶೇಖರ್ ಹಾವಂಜೆ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ)
ಮುಂದಿನ ಸಂಚಿಕೆಯಲ್ಲಿ
ಕಾರ್ಕಳ ಕ್ಷೇತ್ರ……….




