
ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾದ ಪ್ರಮುಖ ಅಂಶಗಳು
ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆದ್ದು ಬಿಜೆಪಿಯನ್ನು ದೊಡ್ಡ ಅಂತರದಿಂದ ಸೋಲಿಸಿದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಕಾಂಗ್ರೆಸ್ ತನ್ನ ಹೆಜ್ಜೆ ಗುರುತು ಇಟ್ಟಿದೆ. ಆದರೆ ರಾಜ್ಯದ ಉಡುಪಿ ಜಿಲ್ಲೆಯ ಎಲ್ಲ ಐದು ಸ್ಥಾನಗಳಲ್ಲಿ ಕಾಂಗ್ರೆಸ್ ಸೋತು ಬಿಜೆಪಿ ಗೆದ್ದು ಬೀಗಿದೆ. ಕೋಮುವಾದದ ಪ್ರಯೋಗ ಶಾಲೆ ಎಂದು ಹೆಸರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಾಂಗ್ರೆಸ್ ಹವಾವನ್ನು ತಡೆಯಲು ಆಗದ ಬಿಜೆಪಿ ಅಲ್ಲೂ ಎರಡೂ ಸ್ಥಾನ ಬಿಟ್ಟು ಕೊಡುವಂತಾಗಿದೆ. ಆದರೆ ಉಡುಪಿಯಲ್ಲಿ ಸೋಲಿಗೆ ಪ್ರಮುಖ ಕಾರಣವೇನು ಎಂದು ಅವಲೋಕಿಸಿದಾಗ ಮುನ್ನಲೆಗೆ ಬಂದ ಪ್ರಮುಖ ಅಂಶಗಳು.
1. ಸೈದ್ದಾಂತಿಕ ಕಾರ್ಯಕರ್ತ ಪಡೆ ನಿರ್ಮಿಸುವಲ್ಲಿ ವಿಫಲತೆ:
ಉಡುಪಿ ಜಿಲ್ಲೆಯಲ್ಲಿ ಸಾಫ್ಟ್ ಹಿಂದುತ್ವದ ಮೊರೆ ಹೋಗಿರುವ ಕಾಂಗ್ರೆಸ್ ಜಾತ್ಯತೀತ, ಎಲ್ಲರನ್ನೂ ಒಳಗೊಳ್ಳುವ ಸೈದ್ದಾಂತಿಕ ಕಾರ್ಯಕರ್ತರ ಪಡೆ ನಿರ್ಮಾಣ ಮತ್ತು ಅವರನ್ನು ಅತ್ಯಂತ ವ್ಯವಸ್ಥಿತವಾಗಿ ತೊಡಗಿಸಿಕೊಳ್ಳುವಲ್ಲಿ ಸೋತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
2. ಬೂತ್ ಲೆವೆಲ್’ನಲ್ಲಿ ದುರ್ಬಲ ಸಂಘಟನಾ ವ್ಯವಸ್ಥೆ: ಬೂತ್ ಲೆವೆಲ್’ನಲ್ಲಿ ಅತ್ಯಂತ ಪ್ರಬಲವಾದ ಸಂಘಟನಾತ್ಮಕ ವ್ಯವಸ್ಥೆಯನ್ನು ಕಾಂಗ್ರೆಸ್ ಹೊಂದಿಲ್ಲ. ಕೇವಲ ಚುನಾವಣೆ ಬರುವ ಸಂದರ್ಭದಲ್ಲಿ ಮಾತ್ರ ಸಕ್ರಿಯಗೊಳ್ಳುವ ಬೂತ್ ಯುನಿಟ್’ಗಳಿಂದಾಗಿ ಜನ ಮತ ಬದಲಾಯಿಸುವಲ್ಲಿ ವಿಫಲತೆ ಅನುಭವಿಸಿದೆ.
3. ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಆಸಕ್ತಿಯಿಂದ ಗೆಲುವು ಸಾಧಿಸುವ ಕುರಿತು ಸ್ಟ್ಯಾಟರ್ಜಿ ರೂಪಿಸುವಲ್ಲಿ ಇತ್ತೀಚಿಗೆ ವಿಫಲವಾಗುತ್ತಿದ್ದು ಈ ಕಾರಣಕ್ಕಾಗಿ ಬಿಜೆಪಿಯತ್ತ ಜನ ಮತ ವಾಲುತ್ತಿದ್ದು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾಂಗ್ರೆಸ್ ಈ ಮುಂಚಿನಂತೆ ನೆಲೆವೂರಲು ಸಾಧ್ಯವಾಗುತ್ತಿಲ್ಲ.
4. ಪಕ್ಷಕ್ಕಿಂತ ವ್ಯಕ್ತಿಗಳಿಗೆ ಪ್ರಾಮುಖ್ಯತೆ ನೀಡಿದ ಪರಿಣಾಮ ಜಿಲ್ಲೆಯ ಹಲವು ಕ್ಷೇತ್ರದಲ್ಲಿ ಕಾಂಗ್ರೆಸ್ ದುರ್ಬಲಗೊಂಡಿದೆ. ಉಡುಪಿ ಕ್ಷೇತ್ರದಲ್ಲಿ ಪ್ರಮೋದ್ ಮಧ್ವರಾಜ್ ನಿರ್ಗಮನ ನಂತರ ಅವರ ಸರಿ ಸಮಾನ ನಾಯಕತ್ವ ಇಲ್ಲ ಎಂಬ ಮಟ್ಟಿಗೆ ಅಭಿಪ್ರಾಯ ರೂಪುಗೊಂಡಿತ್ತು. ಇದಕ್ಕೆ ಮುಖ್ಯ ಕಾರಣ ಪಕ್ಷಕ್ಕಿಂತ ವ್ಯಕ್ತಿ ವೈಭವೀಕರಣ ಪಕ್ಷದಲ್ಲಿ ಹೆಚ್ಚಾಗಿರುವುದರಿಂದ ಇತರ ಕಾರ್ಯಕರ್ತರು ನಿಂತರೆ ಗೆಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
5. ಕ್ರೋಢೀಕರಿತ ಕೆಲವೊಂದು ಜಾತಿಗಳ ಮತವನ್ನು ಹಿಡಿದಿಟ್ಟುಕೊಳ್ಳುವಲ್ಲಿ ವೈಫಲ್ಯ.
6. ಇತರ ಜಿಲ್ಲೆಯ ಕಾಂಗ್ರೆಸ್ ನಾಯಕತ್ವದಂತೆ ಉಡುಪಿ ಕಾಂಗ್ರೆಸ್ ಬಿಜೆಪಿಯ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ಮುಖ್ಯವಾಗಿ ಚುನಾವಣೆಯ ಆರಂಭವಾಗುವ ಮುನ್ನ ಬೆಲೆ ಏರಿಕೆ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟು ಮನೆ ಮನೆಗೆ ತೆರಳಿ ಮನವೊಲಿಸುವ ಪ್ರಯತ್ನದಲ್ಲಿ ಸೋತಿರುವುದು ಸ್ಪಷ್ಟ.
7. ಉಡುಪಿಯ ರಾಜಕೀಯ ವಾತಾವರಣಕ್ಕೆ ಅನುಗುಣವಾಗಿ counter narrative ಸ್ಥಾಪಿಸುವಲ್ಲಿ ಸಂಪೂರ್ಣ ವಿಫಲ.
8. ಯುವ ನಾಯಕತ್ಚ alternative narrative ಸ್ಥಾಪಿಸಲು, ವಿದ್ಯಾರ್ಥಿ-ಯುವಕರ ಸಂಘಟನೆಗಳನ್ನು ಅತ್ಯಂತ ತಳ ಮಟ್ಟದಲ್ಲಿ ಬಲಿಷ್ಠಗೊಳಿಸಲು ಸೋತಿದೆ. ಯುವ ಸಂಘಟನೆಗಳು ಪದಾಧಿಕಾರಿಗಳ ಆಯ್ಕೆಗೆ ಮಾತ್ರ ಸಿಮೀತವಾದಂತೆ ಇದೆ.
9. ಅರ್ಥಿಕ ಸ್ಥಿತಿಗತಿ ಸರಿಯಿಲ್ಲ ಕಾರಣ ಸಂಘಟನಾತ್ಮಕವಾಗಿ ಪ್ರಬಲವಾಗಿದ್ದ ಕಾರ್ಯಕರ್ತರಿಗೆ ಸೀಟ್ ಸಿಕ್ಕಿಲ್ಲ ಎಂಬ ಚರ್ಚೆ ಕೂಡ ನಡೆಯುತ್ತಿದೆ. ಪಕ್ಷದಲ್ಲಿ ಯಾರೂ ಕಾರ್ಯಕರ್ತರು ಅಭ್ಯರ್ಥಿ ಆದರೂ ಗೆಲ್ಲಿಸುವ ನಿಟ್ಟಿನಲ್ಲಿ ಅರ್ಥಿಕ ಕ್ರೋಡೀಕರಣ ಅತೀ ಅಗತ್ಯ.
10.ಕಾರ್ಕಳ,ಉಡುಪಿಯಲ್ಲಿ ಅಭ್ಯರ್ಥಿಗಳನ್ನು ಎರಡು ಮೂರು ತಿಂಗಳ ಮೊದಲು ಖಾತ್ರಿಗೊಳಿಸಿದರೆ ಪ್ರಬಲವಾಗಿ ಜನರನ್ನು ತಲುಪಲು ಸಾಧ್ಯವಾಗುತ್ತಿತ್ತು. ಪಕ್ಷದ ವಿಳಂಬ ನೀತಿ ಕೂಡ ಸೋಲಿಗೆ ಕಾರಣ ಎನ್ನಲಾಗುತ್ತಿದೆ.
ಕರಾವಳಿಯಲ್ಲಿ ಬಿಜೆಪಿ ಹಿಂದುತ್ವ ಕಾರ್ಡ್ ಪ್ರಬಲವಾಗಿ ನೆಚ್ಚಿಕೊಂಡಿದೆ. ಈ ಸಂದರ್ಭದಲ್ಲಿ ಜನರ ಮನಸ್ಸಿನಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಕಾಂಗ್ರೆಸ್ ಬಳಿ ಸೂಕ್ತ ನರೇಟಿವ್ ಇಲ್ಲದಿದ್ದುಕೂಡ ವೈಫಲ್ಯಕ್ಕೆ ಪ್ರಮುಖ ಕಾರಣ. ಒಟ್ಟಿನಲ್ಲಿ ಉಡುಪಿಯಲ್ಲಿ ಸದ್ಯದ ಮಟ್ಟಿಗೆ ಬಿಜೆಪಿಯ ಭದ್ರ ಕೋಟೆಯಾಗಿ ಮುಂದುವರಿದಿದ್ದರೂ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಹಿನ್ನಡೆಯಾಗುವ ಸಾಧ್ಯತೆ ಕೂಡ ಇದೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಉಡುಪಿಯಲ್ಲಿ ಬಿಜೆಪಿ ಶಾಸಕರು ಇರುವ ಕಾರಣ ಯೆಥೆಚ್ಚಾವಾಗಿ ಅನುದಾನ ನೀಡಲಿದೆಯೇ ಎಂಬ ಪ್ರಶ್ನೆ ಒಂದಾದರೆ ಇನ್ನೊಂದು ಕಡೆ ವಿಶೇಷ ಅನುದಾನ ನೀಡಲು ಸರಕಾರ ಮನಸ್ಸು ಮಾಡಲಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.




