
ಕಾಂಗ್ರೆಸ್ಸಿಗರು ಕೋಮುವಾದಿ, ಬಿಜೆಪಿಯ ಸ್ವಾಮೀಜಿಯಾಗಿರುವ ಪೇಜಾವರ ಸ್ವಾಮಿಗಳದ್ದೇ ಕಾಲು ಹಿಡಿಯುವುದೇಕೆ ? – ಪತ್ರಕರ್ತ ನವೀನ್ ಸೂರಿಂಜೆ ಪ್ರಶ್ನೆ
ಪತ್ರಕರ್ತ ನವೀನ್ ಸೂರಿಂಜೆ ಫೆಸ್ಬುಕ್ ಬರಹ
ಕಾಂಗ್ರೆಸ್ ನ ನೂತನ ಮಂತ್ರಿಗಳು ಉಡುಪಿ ಪೇಜಾವರ ಸ್ವಾಮೀಜಿಯನ್ನು ಭೇಟಿಯಾಗುತ್ತಿದ್ದಾರೆ. ಪೇಜಾವರ ಮಠಾಧೀಶರೆಂದರೆ ಉಡುಪಿ ಶ್ರೀ ಕೃಷ್ಣ ಮಠದ ಮುಖ್ಯಸ್ಥರು ಎಂದು ಕಾಂಗ್ರೆಸ್ ಮಂತ್ರಿಗಳು ಭಾವಿಸಿದಂತಿದೆ. ವಾಸ್ತವವಾಗಿ ಉಡುಪಿ ಅಷ್ಟ ಮಠಗಳಲ್ಲಿ ಪೇಜಾವರ ಮಠಕ್ಕೇನೂ ವಿಶೇಷ ಪ್ರಾತಿನಿಧ್ಯವಾಗಲೀ, ಅಧಿಕಾರವಾಗಲೀ ಇಲ್ಲ. ಅಷ್ಟ ಮಠಗಳೂ, ಅಷ್ಟ ಸ್ವಾಮೀಜಿಗಳು ಸಮಾನ ಅಧಿಕಾರವನ್ನು ಹೊಂದಿದೆ. ಯಾವ ಸ್ವಾಮೀಜಿಯೂ ಮಠದೊಳಗೆ ಮೇಲೂ ಅಲ್ಲ, ಕೀಳೂ ಅಲ್ಲ. ಪರ್ಯಾಯ ಸ್ವಾಮೀಜಿಗೆ ಮಾತ್ರ ವಿಶೇಷವಾಗಿ ಪೂಜಾ ಅಧಿಕಾರ ಇರುತ್ತದೆ. ಕಾಂಗ್ರೆಸ್ಸಿಗರಿಗೆ ಉಡುಪಿ ಮಠಕ್ಕೆ ಗೌರವ ಸಲ್ಲಿಸಲೇಬೇಕು ಎಂದಿದ್ದರೆ ಪ್ರಸ್ತುತ ಉಡುಪಿ ಪರ್ಯಾಯ ಪೀಠವೇರಿ, ಸರ್ವಜ್ಞ ಪೀಠದಲ್ಲಿ ಕುಳಿತಿರುವ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿಯ ಆಶೀರ್ವಾದ ಪಡೆಯಲಿ. ವಿದ್ಯಾಸಾಗರ ತೀರ್ಥ ಸ್ವಾಮೀಜಿಯು ಪ್ರಸ್ತುತ ಉಡುಪಿ ಶ್ರೀಕೃಷ್ಣ ಮಠದ ಅಧಿಕೃತ ಉಸ್ತುವಾರಿಗಳು ! ಪೇಜಾವರ ಈಗ ಒಬ್ಬ ಸಾಮಾನ್ಯ ಸ್ವಾಮೀಜಿಯಷ್ಟೆ.
ಪೇಜಾವರ ಮಠ ಎನ್ನುವುದು ಅಷ್ಟ ಮಠಗಳ ಪೈಕಿ ಒಂದು ಮಠವಷ್ಟೆ. ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳು ಹಿಂದುತ್ವ ಹೋರಾಟ, ಬಿಜೆಪಿಯ ರಾಜಕೀಯದಲ್ಲಿ ಸಕ್ರೀಯರಾದ್ದರಿಂದ ಬಿಜೆಪಿ ವಲಯದಲ್ಲಿ ಪ್ರಭಾವಶಾಲಿಯಾಗಿದ್ದರು. ಜೊತೆಗೆ ವಿಶ್ವೇಶತೀರ್ಥ ಸ್ವಾಮೀಜಿಗಳಿಗೆ ರಾಜಕೀಯ, ಸಾಮಾಜಿಕ ವಿದ್ಯಾಮಾನಗಳಿಗೆ ಪ್ರತಿಕ್ರಿಯಿಸುವ ಉತ್ಸಾಹ ಇದ್ದಿದ್ದರಿಂದ ಚಾಲ್ತಿಯಲ್ಲಿದ್ದರು. ವಿಶ್ವೇಶತೀರ್ಥರು ತಾನು ಬಿಜೆಪಿ/ಹಿಂದು ಸಂಘಟನೆಗಳ ಸ್ವಾಮಿಯೆಂದೇ ಬಿಂಬಿಸಿಕೊಂಡಿದ್ದರು. ವಿಶ್ವೇಶತೀರ್ಥರು ನಿಧನರಾದ ಬಳಿಕ ಪೇಜಾವರ ಪೀಠಾಧಿಪತಿಯಾಗಿರುವ ವಿಶ್ವಪ್ರಸನ್ನ ತೀರ್ಥ ಸ್ವಾಮಿಯು ಬುದ್ದಿಹೀನ ಕೋಮುವಾದಿಯಂತೆ ವರ್ತಿಸುತ್ತಿದ್ದಾರೆ. ಇಂತಹ ಬಿಜೆಪಿ ಸ್ವಾಮೀಜಿಯ ಆಶೀರ್ವಾದವನ್ನು ಪಡೆಯುವುದಕ್ಕಿಂತ ನೇರವಾಗಿ ಬಿಜೆಪಿ ನಾಯಕರ ಆಶೀರ್ವಾದವನ್ನೇ ಪಡೆಯಬಹುದಲ್ಲವೇ ? ಕಾಂಗ್ರೆಸ್ ನಾಯಕರಿಗೇನಾದರೂ ಉಡುಪಿ ಶ್ರೀ ಕೃಷ್ಣ ಮಠದ ಸ್ವಾಮೀಜಿಗಳ ಆಶೀರ್ವಾದವೇ ಬೇಕೆಂದಿದ್ದರೆ ಉಡುಪಿ ಪರ್ಯಾಯ ಸ್ವಾಮೀಜಿಯನ್ನೋ, ಅಥವಾ ಯಾವ ರಾಜಕೀಯವನ್ನೂ ಮಾಡದ ಏಳು ಸ್ವಾಮೀಜಿಗಳ ಪೈಕಿ ಯಾವ ಸ್ವಾಮೀಜಿಯನ್ನಾದರೂ ಸಂಪರ್ಕಿಸಬಹುದಿತ್ತು.

ಕಾಂಗ್ರೆಸ್ಸಿಗರು ಕೋಮುವಾದಿ, ಬಿಜೆಪಿಯ ಸ್ವಾಮೀಜಿಯಾಗಿರುವ ಪೇಜಾವರ ಸ್ವಾಮಿಗಳದ್ದೇ ಕಾಲು ಹಿಡಿಯುವುದೇಕೆ ? ಉಡುಪಿ ಅಷ್ಟಮಠದ ಉಳಿದ ಸ್ವಾಮೀಜಿಗಳು ಸ್ವಾಮೀಜಿಗಳಲ್ಲವೇ ?
- ನವೀನ್ ಸೂರಿಂಜೆ




