
ಕಲ್ಯಾಣದಿಂದ ಸ್ಪರ್ಧಿಸಲ್ಲ ಎಂದ ಖೇಣಿ
ಬೀದರ್,ಜ.23:- ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುವದಿಲ್ಲ ಎಂದು ಮಾಜಿ ಶಾಸಕ ಅಶೋಕ ಖೇಣಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್ ದಕ್ಷಿಣ ಕ್ಷೇತ್ರ ಬಿಡಲ್ಲ ಎಂದು ಹೇಳಿದರು.
ಬಸವಕಲ್ಯಾಣದಲ್ಲಿ ಅದೇ ಕ್ಷೇತ್ರದವರು ಸ್ಪರ್ಧಿಸಬೇಕು. ಹೊರಗಿನವರು ಸ್ಪರ್ಧಿಸಿದರೆ ಆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಆಗುವುದಿಲ್ಲ. ಮತದಾರರು ಚುನಾಯಿತ ಪ್ರತಿನಿಧಿಯನ್ನು ಸುಲಭವಾಗಿ ಸಂಪರ್ಕಿಸಲು ಸಾಧ್ಯವೂ ಆಗುವುದಿಲ್ಲ. ಸ್ಥಳೀಯರಿಗೆ ಟಿಕೆಟ್ ಕೊಡುವುದು ಒಳ್ಳೆಯದು ಮಾಜಿಶಾಸಕ ಖೇಣಿ ಅಭಿಪ್ರಾಯಪಟ್ಟರು.
ಶಾಸಕರಾಗಿದ್ದ ಬಿ.ನಾರಾಯಣರಾವ್ ಅವರ ಪತ್ನಿ ಅಥವಾ ಪುತ್ರನಿಗೆ ಟಿಕೆಟ್ ಕೊಡುವುದು ಪಕ್ಷದ ವರಿಷ್ಠರಿಗೆ ಹಾಗೂ ಸ್ಪರ್ಧಿಸಲು ಇಚ್ಛಿಸುವವರಿಗೆ ಬಿಟ್ಟ ವಿಚಾರ. ಈ ವಿಷಯದಲ್ಲಿ ನಾನು ಮಾತನಾಡಲು ಇಷ್ಟಪಡುವುದಿಲ್ಲ ಎಂದರು.
ಕ್ಷೇತ್ರದ ಜನರಿಗೆ ಉದ್ಯೋಗ ಕಲ್ಪಿಸುವ ದಿಸೆಯಲ್ಲಿ 500 ಎಕರೆ ಪ್ರದೇಶದಲ್ಲಿ 100 ಕೋಟಿ ವೆಚ್ಚದಲ್ಲಿ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸುವ ಉದ್ದೇಶ ಹೊಂದಿದ್ದೇನೆ ಎಂದು ತಿಳಿಸಿದರು.
ಉದ್ಯಮಿಗಳು, ರೈತರು ಹಾಗೂ ಗ್ರಾಮದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.




