
ಬೆಂಗಳೂರಿನಲ್ಲಿ ವಿಧ್ವಂಸ ಕೃತ್ಯಕ್ಕೆ ಸಂಚು ರೂಪಿಸಿದ್ದ ಐದು ಮಂದಿಯ ಬಂಧನ – ಬೆಂಗಳೂರು ಕಮಿಷನರ್ ದಯಾನಂದ ಮಾಹಿತಿ
ಬೆಂಗಳೂರು: ಸಿಸಿಬಿ ತಂಡಕ್ಕೆ ದೊರಕಿದ ಖಚಿತ ಮಾಹಿತಿಯ ಆಧಾರದಲ್ಲಿ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಐದು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬೆಂಗಳೂರು ಕಮಿಷನರ್ ದಯಾನಂದ ಅವರು ಮಾಹಿತಿ ನೀಡಿದರು.
ಆರೋಪಿಗಳು ಹೆಬ್ಬಾಳ ವ್ಯಾಪ್ತಿಯ ಮನೆಯೊಂದರಲ್ಲಿ ವಾಸವಾಗಿದ್ದು ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಅವರಿಂದ ಏಳು ಕಂಟ್ರಿ ಮೇಡ್ ಪಿಸ್ತೂಲು, 45 ಮದ್ದು ಗುಂಡುಗಳು, ಡ್ರ್ಯಾಗನ್ ಮತ್ತು ಹನ್ನೆರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಆರೋಪಿಗಳು ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ನಝೀರ್ ಒಟ್ಟಿಗೆ ಸಂಪರ್ಕ ಹೊಂದಿದ್ದರು. ಮತ್ತೋರ್ವ ಆರೋಪಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದು ಆತನೊಂದಿಗೂ ಸಂಪರ್ಕದಲ್ಲಿದ್ದರು ಎಂದರು. ನಝೀರ್ ಲಷ್ಕರೆ ತೊಯಿಬಾ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ಮಾಹಿತಿ ನೀಡಿದರು.
ಜೈಲಿನಲ್ಲಿ ಆರೋಪಿ ನಝೀರ್ ಈ ಐದು ಮಂದಿಗೆ ತರಬೇತಿ ನೀಡುತ್ತಿದ್ದ ಎಂದು ಕಮಿಷನರ್ ದಯಾನಂದ ಮಾಹಿತಿ ನೀಡಿದ್ದಾರೆ. ಇದೀಗ ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸುತ್ತಿದ್ದೇವೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದರೊಂದಿಗೆ ಅವರ ಮೇಲೆ ಯುಎಪಿಎ ಕಾಯಿದೆಯಡಿಯೂ ಪ್ರಕರಣ ದಾಖಲಿಸಲಾಗಿದೆ. ಕೇಂದ್ರೀಯ ತನಿಖಾ ಸಂಸ್ಥೆಯೊಂದಿಗೆ ರಾಜ್ಯ ಪೊಲೀಸರು ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.




