
ಅಧಿವೇಶನದಲ್ಲಿ ಈಶ್ವರ್- ಸೋಮಣ್ಣ ನಡುವೆ ಮಾತಿನ ಚಕಮಕಿ
ಬೆಂಗಳೂರು,ಫೆ. 5:- ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ವಸತಿ ಯೋಜನೆ ಹಗರಣಕ್ಕೆ ಸಂಬಂಧಿಸಿದಂತೆ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹಾಗೂ ವಸತಿ ಸಚಿವ ವಿ. ಸೋಮಣ್ಣ ಅವರ ನಡುವೆ ಮಾತಿನ ಚಕಮಕಿ ನಡೆದಿದೆ.
ಗುರುವಾರ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪವಾದಾಗ ಬಿಸಿಬಿಸಿ ಚರ್ಚೆ, ಆರೋಪ ಪ್ರತ್ಯಾರೋಪ, ವೈಯುಕ್ತಿಕ ನಿಂದನೆಯೂ ನಡೆಯಿತು.
ಸಚಿವ ಸೋಮಣ್ಣ ಮತ್ತು ಮಾಧುಸ್ವಾಮಿ ಅವರ ಆರೋಪ, ಟೀಕೆಗಳಿಗೆ ಉತ್ತರಿಸುವುದು ಈಶ್ವರ ಖಂಡ್ರೆಗೆ ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ಕೆ.ಆರ್. ರಮೇಶಕುಮಾರ ಅವರು ಖಂಡ್ರೆ ರಕ್ಷಣೆಗೆ ಧಾವಿಸಿದ್ದಲ್ಲದೆ, ಆರೋಪಗಳನ್ನು ತಳ್ಳಿ ಹಾಕಲು ಯತ್ನಿಸಿದರು.
ಕಾನೂನು ಪ್ರಕಾರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯು ಮನೆ ಮಂಜೂರಾತಿ ಪತ್ರ ಹಾಗೂ ಕಾರ್ಯಾದೇಶ ನೀಡಬೇಕು. ಆದರೆ, ಭಾಲ್ಕಿಯಲ್ಲಿ ಎಲ್ಲವೂ ಉಲ್ಟಾ ನಡೆದಿದೆ ಎಂದು ವಸತಿ ಸಚಿವ ಸೋಮಣ್ಣ ಆರೋಪಿಸಿದರು.
ಮಧ್ಯಪ್ರವೇಶಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಈಶ್ವರ ಖಂಡ್ರೆ ಕೊಟ್ಟಿರುವುದು ಮನೆ ಮಂಜೂರಾತಿ ಪತ್ರಗಳಲ್ಲ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದರು. ಆಗ, ವಸತಿ ಸಚಿವ ವಿ. ಸೋಮಣ್ಣ ಅವರು ಶಾಸಕ ಖಂಡ್ರೆ ಫೋಟೊ ಹಾಗೂ ಸಹಿ ಇರುವ ಮಂಜೂರಾತಿ ಪತ್ರಗಳನ್ನು ಸದನದಲ್ಲಿ ಓದಿ ಹೇಳಿದರು.
ಮದ್ಯವರ್ತಿಗಳು ಫಲಾನುಭವಿಗಳಿಂದ ಹಣ ವಸೂಲಿ ಮಾಡುವುದನ್ನು ತಪ್ಪಿಸಲು ಪತ್ರ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ. ಇದರ ಅರ್ಥ ಏನು, ಇಡೀ ವ್ಯವಸ್ಥೆಯೇ ಭ್ರಷ್ಟವಾಗಿದೆಯೇ ಎಂದು ಸಚಿವ ಮಾಧುಸ್ವಾಮಿ ಪ್ರಶ್ನಿಸಿದರು.




