
ಹಮಾಸ್ ದಾಳಿಯನ್ನು ಮಾತ್ರ ಭಯೋತ್ಪಾದಕ ಎಂದು ಖಂಡಿಸಿ, ಇಸ್ರೇಲ್ ನ ಭಯೋತ್ಪಾದಕ ಆಕ್ರಮಣವನ್ನು ಬೆಂಬಲಿಸುತ್ತಿರುವುದೂ ಸಹ ಒಂದು ಜಾಗತಿಕ ಭಯೋತ್ಪಾದಕ ಕೃತ್ಯವಲ್ಲವೇ….? – ಶಿವ ಸುಂದರ್ ಪ್ರಶ್ನೆ
ಚಿತ್ರ: ಶಿವ ಸುಂದರ್ (ಸಾಂದರ್ಭಿಕ ಚಿತ್ರ)
ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷ ಇಡೀ ಜಗತ್ತಿನ ಗಮನ ಸೆಳೆದಿದ್ದು ಪರ ವಿರೋಧ ಚರ್ಚೆಗಳು ವ್ಯಾಪಕವಾಗಿದೆ. ಈ ನಡುವೆ ಈ ಬಿಕ್ಕಟ್ಟಿನ ಕುರಿತು ಸಾಮಾಜಿಕ ಕಾರ್ಯಕರ್ತ ಶಿವ ಸುಂದರ್ ಅವರು ಬರೆದಿದ್ದನ್ನು ಓದಿ.
“ನಿರಾಯುಧ 900 ಇಸ್ರೇಲಿಗಳನ್ನು ಕೊಂದ ಹಮಾಸ್ ನ ಕೃತ್ಯವನ್ನು ಸರಿಯಾಗಿಯೇ ಖಂಡಿಸುವ ಜಗತ್ತಿನ, ಭಾರತದ ಪ್ರಜಾತಂತ್ರವಾದಿಗಳೆ, ಮಾನವತಾವಾದಿಗಳೇ…….
ಗಾಜಾ ಪ್ರದೇಶಕ್ಕೆ ಆಹಾರ, ನೀರು, ಇಂಧನ, ವಿದ್ಯುತ್.. ಎಲ್ಲದರ ಸರಬರಾಜನ್ನು ನಿಲ್ಲಿಸಿ, ಅಲ್ಲಿ ವಾಸಿಸುತ್ತಿರುವ 23 ಲಕ್ಷ ನಿರಾಯುಧ ಪ್ಯಾಲೇಸ್ತಿನಿಯರ ನರಮೇಧ ಮಾಡಹೊರಟಿರುವ ಇಸ್ರೇಲ್ ನ ಜಿಯೋನಿಸ್ಟ್ ಸರ್ಕಾರವನ್ನು ಅಷ್ಟೇ ಕಟು ಮಾತುಗಳಿಂದ ಖಂಡಿಸುವಿರೇ ….?
ಇಲ್ಲವೆಂದರೆ ನಿಮ್ಮ ನಿಲುವಿನಲ್ಲಿ ಬಚ್ಚಿಟ್ಟುಕೊಂಡಿರುವ ಭಯೋತ್ಪಾದಕತೆಯನ್ನು ಒಪ್ಪಿಕೊಳ್ಳುವಿರೆ?
ಆತ್ಮೀಯರೇ,
ಇಸ್ರೇಲ್ ಮೇಲೆ ಹಮಾಸ್ ದಾಳಿ ಖಂಡನರ್ಹ..
. ಆದರೆ ಇಸ್ರೇಲ್ ಮಾಡಿರುವ ಪ್ಯಾಲೇಸ್ತಿನ್ ಆಕ್ರಮಣ, ಅತಿಕ್ರಮಣ, ಕಗ್ಗೊಲೆಗಳನ್ನು ಏಕೆ ಖಂಡನೆಗೆ ಒಳಗಾಗುವುದಿಲ್ಲ???
ಏಕೆಂದರೆ…
ಇಸ್ರೇಲಿಗಳು ಬಲಿಷ್ಠರು.. ಮತ್ತು ಅಮೇರಿಕದಂತ ಬಲಿಷ್ಠ ರಾಷ್ಟ್ರಗಳ ಬೆಂಬಲಿತರು…
ಹೀಗಾಗಿ ಅವರ ದುರಭಿಮಾನಿ, ಜನಾಂಗಿಯ ಅಕ್ರಮಣಗಳನ್ನು ಸಹ ನಾಗರಿಕ ಜಗತ್ತು ಆತ್ಮ ರಕ್ಷಣೆ ಎಂದು ಮಾನ್ಯ ಮಾಡುತ್ತವೆ..
ನಿರಾಯುಧ ಪ್ಯಾಲೇಸ್ತೀನಿ ನಾಗರಿಕರ ಮೇಲೆ ದಾಳಿ ಮಾಡಲು ಯುದ್ಧ ವಿಮಾನಗಳನ್ನು ಕಳಿಸಿ ಬೆಂಬಲಿಸುತ್ತವೆ …
ಪ್ಯಾಲೇಸ್ತಿನಿಯರು
ದುರ್ಬಲರು.
ಅರಬ್ಬರು…
ಗುಡಿಸಲು ಹೊಕ್ಕ ಇಸ್ರೇಲಿ ಒಂಟೆಯಿಂದ ನೆಲವನ್ನು, ನೆಲೆಯನ್ನು ಕಳೆದುಕೊಂಡವರು…
ಅಮೇರಿಕ ನೇತೃತ್ವದ ಬಿಳಿಯ ಜಗತ್ತಿನ ಸೊಗಲಾಡಿತನಕ್ಕೆ ಬಲಿಯಾದವರು…
ಒಂಟಿ ಹೋರಾಟ ನಡೆಸುತ್ತಿರುವರು..
ಅವರಲ್ಲಿ ಕೆಲವರು ಅಸಹಾಯಕ ಆಕ್ರೋಶದಿಂದ ಹಮಾಸ್ ಸೇರಿಕೊಂಡು ಇಸ್ರೇಲಿ ಸರ್ಕಾರ ಮತ್ತು ಇಸ್ರೇಲಿ ನಾಗರಿಕರ ನಡುವಿನ ವ್ಯತ್ಯಾಸ ಮರೆತವರು…ಖಂಡನರ್ಹ ಭಯೋತ್ಪಾದನಾ ಆತ್ಮ ರಕ್ಷಣಾ ಕೃತ್ಯಗಳಲ್ಲಿ ತೊಡಗಿಕೊಂಡವರು…
ಆದರೆ,
1947 ರಿಂದ ಇಸ್ರೇಲ್ ನಿರಾಯುಧ ಪ್ಯಾಲೆಸ್ತಿನಿಯರ ಮೇಲೆ ಟ್ಯಾಂಕರ್ ದಾಳಿ ಮಾಡುತ್ತಾ ಅವರ ಪ್ರದೇಶಗಳನ್ನು ಆಕ್ರಮಿಸುತ್ತಿರುವುದನ್ನು ಭಯೋತ್ಪಾದನೆ ಎಂದು ಖಂಡಿಸದವರು …
ಬದಲಿಗೆ ಅವರ ಅತಿಕ್ರಮಣಗಳಿಗೆ ಸಹಾಯ ಮಾಡಿದವರು …
ಈಗ…..
ಇಸ್ರೇಲಿ ಸರ್ಕಾರ ಗಾಜಾ ಪಟ್ಟಿಯಲ್ಲಿ ನಡೆಸಲು ಉದ್ದೇಶಿಸಿರುವ 23 ಲಕ್ಷ ಪ್ಯಾಲೇಸ್ತೀನಿ ನಿರಾಯುಧ ನಾಗರಿಕರ ನರಮೇಧಕ್ಕೆ ಸೈನಿಕ ಹಾಗೂ ರಾಜತಾಂತ್ರಿಕ ಬೆಂಬಲ ಕೊಡುತ್ತಿರುವವರು …
” ಪ್ಯಾಲೇಸ್ತಿನಿಯರೆಲ್ಲರೂ ಮಾನವ ಮೃಗಗಳು, ಅವರನ್ನು ಪ್ರಾಣಿಗಳಂತೆ ಬೇಟೆಯಾಡಲಾಗುವುದು*” ಎಂದು ಬಹಿರಂಗವಾಗಿ ಘೋಷಿಸಿರುವ ಇಸ್ರೇಲ್ ನ ಜಿಯೋನಿಸ್ಟ್ ಪ್ರಧಾನಿ ನೇತಾನ್ಯಾಹು ವನ್ನು ಬಹಿರಂಗವಾಗಿಯೇ ಸಮರ್ಥಿಸುವವರು ….
ಹಮಾಸ್ ದಾಳಿಯನ್ನು ಮಾತ್ರ ಭಯೋತ್ಪಾದಕ ಎಂದು ಖಂಡಿಸಿ, ಇಸ್ರೇಲ್ ನ ಟೆರರಿಸ್ಟ್ ಆಕ್ರಮಣವನ್ನು ಬೆಂಬಲಿಸುತ್ತಿರುವುದೂ ಸಹ ಒಂದು ಜಾಗತಿಕ ಟೆರರಿಸ್ಟ್ ಕೃತ್ಯವಲ್ಲವೇ….?




