Crime

ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣೆ ಸಮಿತಿ ಸಭೆ ಶಾಲೆಗಳ ಶೌಚಾಲಯ ಸ್ಥಿತಿಗತಿ; ತಕ್ಷಣ ವರದಿಗೆ ತಾಕೀತು

ಬಳ್ಳಾರಿ,ಸೆ.30: ಜಿಲ್ಲೆಯಲ್ಲಿರುವ ಸರಕಾರಿ ಶಾಲೆಗಳಲ್ಲಿನ ಶೌಚಾಲಯಗಳ ಸದ್ಯದ ಸ್ಥಿತಿಗತಿ ಹಾಗೂ ಆಗಬೇಕಾಗಿರುವ ಕಾರ್ಯಗಳ ಕುರಿತ ಸಮಗ್ರ ವರದಿಯನ್ನು ಶೀಘ್ರವಾಗಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಂಸದರಾದ ವೈ.ದೇವೇಂದ್ರಪ್ಪ ಹಾಗೂ ಸಂಗಣ್ಣ ಕರಡಿ ಅವರು ವರದಿ ಪರಿಶೀಲಿಸಿ ಅಗತ್ಯವಿರುವಡೆ ಶೌಚಾಲಯಗಳ ದುರಸ್ತಿ ಮತ್ತು ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣೆ ಸಮಿತಿ(ದಿಶಾ)ಗೆ ಸಂಬಂಧಿಸಿದಂತೆ ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಯಾವುದೇ ಶಾಲೆಯಲ್ಲಿ ಶಾಲಾ ಮಕ್ಕಳು ಶೌಚದ ಸಮಸ್ಯೆ ಎದುರಿಸಬಾರದು;ಈ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಅತಿಹೆಚ್ಚು ದಾಖಲಾತಿಯ 15 ಶಾಲೆಗಳು ಮಾದರಿ ಶಾಲೆಗಳಾಗಿ ಪರಿವರ್ತನೆ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಅತಿಹೆಚ್ಚು ದಾಖಲಾತಿ ಹೊಂದಿರುವ 15 ಶಾಲೆಗಳನ್ನು ಗುರುತಿಸಲಾಗಿದ್ದು,ಅವುಗಳನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಯೋಜನೆ ಹಾಕಿಕೊಂಡಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ತಿಳಿಸಿದರು.
ಕುಡಿಯುವ ನೀರು,ಆಟದ ಮೈದಾನ, ಪೌಷ್ಟಿಕ ಕೈ ತೋಟ,ಬೆಂಚ್ ವ್ಯವಸ್ಥೆ, ಶೌಚಾಲಯ ಸೇರಿದಂತೆ ಸಮಗ್ರ ಸೌಲಭ್ಯಗಳನ್ನು ಒದಗಿಸಿ ಈ 15 ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಪರಿವರ್ತಿಸಲಾಗುವುದು. ನಂತರ ಎರಡನೇ ಹಾಗೂ ಮೂರನೇ ಹಂತದಲ್ಲಿಯೂ ಇದೇ ರೀತಿ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂಬುದನ್ನು ಅವರು ಸಭೆಗೆ ವಿವರಿಸಿದರು.
ನರೇಗಾ ಅಡಿ ಹಸೀರುಕರಣಕ್ಕೆ ಆದ್ಯತೆ ನೀಡಿ: ಜಿಲ್ಲೆಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬಳಸಿಕೊಂಡು ಅರಣ್ಯ,ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಸಮನ್ವಯದ ಮೂಲಕ ಜಿಲ್ಲೆಯಲ್ಲಿ ಹಸೀರುಕರಣಕ್ಕೆ ಆದ್ಯತೆ ನೀಡಬೇಕು ಎಂದು ಸಂಸದ ವೈ.ದೇವೇಂದ್ರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನರೇಗಾ ಅಡಿ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿರುವುದನ್ನು ಶ್ಲಾಘಿಸಿ ಅಭಿನಂದಿಸಿದ ಸಂಸದದ್ವಯರಾದ ದೇವೇಂದ್ರಪ್ಪ ಮತ್ತು ಸಂಗಣ್ಣ ಕರಡಿ ಅವರು ಇದೇ ರೀತಿಯ ಕೆಲಸಗಳನ್ನು ಮುಂದುವರಿಸುವಂತೆ ತಿಳಿಸಿದರು.
ಬಳ್ಳಾರಿ ಜಿಲ್ಲೆಗೆ ಈ ವರ್ಷ 90 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ನೀಡಲಾಗಿದ್ದು,ತ್ರೈಮಾಸಿಕ ಅವಧಿಯಲ್ಲಿ 34ಲಕ್ಷ ಮಾನವ ದಿನಗಳ ಸೃಜನೆ ಮಾಡಿ ಶೇ.118ರಷ್ಟು ಪ್ರಗತಿ ಸಾಧಿಸಲಾಗಿದೆ. 100,225 ಕಾರ್ಮಿಕರು ಕೆಲಸ ನಿರ್ವಹಿಸಿದ್ದು,3566 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಜಿಪಂ ಉಪಕಾರ್ಯದರ್ಶಿಯೊಬ್ಬರು ಸಭೆಗೆ ವಿವರಿಸಿದರು.
*ಘನತ್ಯಾಜ್ಯ ಘಟಕಗಳಿಗೆ ನಿವೇಶನ ಸಮಸ್ಯೆ;15 ದಿನಗಳಲ್ಲಿ ಪರಿಹಾರ: ಸ್ವಚ್ಛ ಭಾರತ ಮಿಶನ್ ಅಡಿ ಬಳ್ಳಾರಿ ಜಿಲ್ಲೆಯಲ್ಲಿರುವ 237 ಗ್ರಾಪಂಗಳಲ್ಲಿ 139 ಗ್ರಾಪಂಗಳಲ್ಲಿ ಈಗಾಗಲೇ ಘನತ್ಯಾಜ್ಯ ಘಟಕಗಳನ್ನು ಸ್ಥಾಪಿಸಲಾಗಿದೆ.ಇನ್ನೂ 86 ಗ್ರಾಪಂಗಳಲ್ಲಿ ನಿವೇಶನ ಸಮಸ್ಯೆ ಇರುವುದರಿಂದ ಘಟಕಗಳು ಸ್ಥಾಪಿಸಲು ಆಗಿರುವುದಿಲ್ಲ ಎಂಬುದನ್ನು ಸಭೆಗೆ ಜಿಪಂ ಉಪಕಾರ್ಯದರ್ಶಿ ಜಾನಕಿರಾಂ ಅವರು ವಿವರಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಈ ಸಮಸ್ಯೆ ನಮ್ಮ ಗಮನಕ್ಕೆ ಬಂದಿದ್ದು ಇನ್ನೂ 15 ದಿನಗಳಲ್ಲಿ ನಿವೇಶನ ದೊರಕಿಸಿಕೊಡಲಾಗುವುದು ಎಂದರು. ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಇನ್ನೂ ಎರಡು ತಿಂಗಳಲ್ಲಿ ಈ ಗ್ರಾಪಂಗಳಲ್ಲಿಯೂ ಘನತ್ಯಾಜ್ಯ ಘಟಕಗಳನ್ನು ಆರಂಭಿಸಲು ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರದ ವಿವಿಧ ಯೋಜನೆಗಳ ಕುರಿತು ಸಭೆಯಲ್ಲಿ ಸುಧೀರ್ಘ ಚರ್ಚೆಗಳು ನಡೆದವು.
ಸಭೆಯಲ್ಲಿ ಶಾಸಕರಾದ ಜಿ.ಸೋಮಶೇಖರ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button