
ಕಾಂಗ್ರೆಸ್ ‘ಕುಟುಂಬ ನಿಯಂತ್ರಿತ’ ಪಕ್ಷ ಎಂದ ಶಶಿ ತರೂರ್; ವಿವಾದವಾಗುತ್ತಲೇ ಸ್ಪಷ್ಟನೆ!
ತಿರುವನಂತಪುರಂ: ಕಾಂಗ್ರೆಸ್ ‘ಕುಟುಂಬ ನಿಯಂತ್ರಿತ’ ಪಕ್ಷವಾಗಿರುವುದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆದ್ದರೆ ರಾಹುಲ್ ಗಾಂಧಿ ಪ್ರಧಾನಿಯಾಗಬಹುದು ಎಂದು ಕಾಂಗ್ರೆಸ್ ಸಂಸದ ಹಾಗೂ ಹಿರಿಯ ನಾಯಕ ಶಶಿ ತರೂರ್ ಹೇಳಿದ್ದಾರೆ.
ತಿರುವನಂತಪುರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೋಮವಾರ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಪ್ರಧಾನಿ ಅಭ್ಯರ್ಥಿಯಾಗಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಹಲವು ರೀತಿಯಲ್ಲಿ ‘ಕುಟುಂಬ ನಡೆಸುವ’ ಪಕ್ಷವಾಗಿರುವುದರಿಂದ ರಾಹುಲ್ ಗಾಂಧಿ ಪ್ರಧಾನಿಯಾಗಬಹುದು ಎಂದು ಹೇಳಿದ್ದಾರೆ.
ಇನ್ನು ಶಶಿತರೂರ್ ಅವರ ಈ ಹೇಳಿಕೆಗೆ ಕಾಂಗ್ರೆಸ್ ಪಕ್ಷದಲ್ಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಲೇ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿರುವ ಅವರು, ‘ನಾನು ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾಡಿದ ಹೇಳಿಕೆಯು ಸಾರ್ವಜನಿಕ ಬಳಕೆಗಾಗಿ ರಚಿಸಲಾದ ಔಪಚಾರಿಕ ಹೇಳಿಕೆಯಲ್ಲ. ನನ್ನ ಹೇಳಿಕೆಯನ್ನು ಸಾಮಾನ್ಯ ಜನರಿಂದ ತಪ್ಪಾಗಿ ನಿರೂಪಿಸಲಾಗುತ್ತಿದೆ. ಹೌದು, ನೆಹರೂ/ಗಾಂಧಿ ಕುಟುಂಬದ ಡಿಎನ್ಎ ಮತ್ತು ಕಾಂಗ್ರೆಸ್ ಪಕ್ಷದೊಂದಿಗೆ ಬೇರ್ಪಡಿಸಲಾಗದಂತೆ ನಂಟು ಇದೆ ಎಂದು ನಾನು ಆಗಾಗ ಹೇಳುತ್ತಲೇ ಬಂದಿದ್ದೇನೆ. ಕುಟುಂಬವೇ ಪಕ್ಷದ ಶಕ್ತಿ. ನಾನು ಹೇಳದೆ ಬಿಟ್ಟಿರುವುದು ರಾಹುಲ್ ಗಾಂಧಿ ಅವರೇ ಪಕ್ಷದ ಆಯ್ಕೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ. ಪಕ್ಷದೊಳಗಿನ ಯಾವುದೇ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಅಗಾಧ ಆಯ್ಕೆ ಅವರೇ ಆಗಿದ್ದಾರೆ ಎಂದು ಹೇಳಿದ್ದಾರೆ.




