
ವೇತನಾನುದಾನಕ್ಕೆ ಒತ್ತಾಯಿಸಿ 9 ರಂದು ಪ್ರತಿಭಟನೆ
ಬೀದರ್, ಫೆ. 6:- ವೇತನಾನುದಾನಕ್ಕೆ ಒಳಪಡಿಸುವುದೂ ಸೇರಿದಂತೆ ಎಲ್ಲ ಬೇಡಿಕೆಗಳನ್ನು ಫೆ. 15 ರೊಳಗೆ ಈಡೇರಿಸದಿದ್ದಲ್ಲಿ ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟಿಸಲಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘದ ಜಿಲ್ಲಾ ಘಟಕದ ಪ್ರಮುಖರು ಇಲ್ಲಿ ಎಚ್ಚರಿಸಿದರು.
ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಖಜಾಂಚಿ ರಾಜೇಂದ್ರ ಮಣಗಿರೆ ಮತ್ತಿತರ ಪದಾಧಿಕಾರಿಗಳು, ಫೆ. 9 ರಂದು ಕಲಬುರಗಿ ನಗರದಲ್ಲಿ ಅನುದಾನಕ್ಕಾಗಿ ಭಿಕ್ಷಾಟನೆ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು.
ಕಲಬುರಗಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಕೆಕೆಆರ್ಡಿಬಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಅಲ್ಲಿಯೇ ಪ್ರತಿಭಟನೆ ನಡೆಸಲಾಗುತ್ತದೆ. ಕಲ್ಯಾಣ ಕರ್ನಾಟಕದ ಎಲ್ಲ 7 ಜಿಲ್ಲೆಗಳ ಸುಮಾರು 5000 ಕ್ಕೂ ಹೆಚ್ಚು ಶಾಲಾ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
371 ಜೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಬಳಕೆಯಾಗದೆ ಇರುವ ನಿಧಿಯನ್ನು ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಏಳಿಗೆಗೆ ಬಳಸಿವುದು, 1995 ರಿಂದ 2015 ರ ಅವಧಿಯಲ್ಲಿ ಆರಂಭವಾದ ಎಲ್ಲ ಕನ್ನಡ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸುವುದು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ 371 ಜೆ ಅಡಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಪ್ರಮುಖ ಬೇಡಿಕೆಯಲ್ಲಿ ಸೇರಿವೆ.




