Crime

ವಚನ ವಿಜಯೋತ್ಸವ: ಸರಳ ಆಚರಣೆಗೆ ನಿರ್ಧಾರ

ಬೀದರ್,ಫೆ.10:- ಇಲ್ಲಿನ ಲಿಂಗಾಯತ ಮಹಾಮಠ ಬಸವ ಸೇವಾ ಪ್ರತಿಷ್ಠಾನದಿಂದ ಬಸವಗಿರಿಯಲ್ಲಿ ಪ್ರತಿವರ್ಷವೂ ಆಚರಿಸಲ್ಪಡುವ ವಚನ ವಿಜಯೋತ್ಸವವು ಕಲ್ಯಾಣ ಕರ್ನಾಟಕದ ಹೆಮ್ಮೆಯೆಂದೇ ಪ್ರಸಿದ್ಧವಾಗಿದೆ. ನಾಡಿನ ಎಲ್ಲೆಡೆಯಿಂದ ಬಸವಾಭಿಮಾನಿಗಳು ಮತ್ತು ಬಸವಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಶರಣ ಸಂಸ್ಕøತಿಯ ಪ್ರತೀಕವಾಗಿ ಜನ-ಮನದಲ್ಲಿ ಬಸವಾದಿ ಶರಣರ ಮಾನವೀಯ ಮೌಲ್ಯಗಳನ್ನು ಬಿತ್ತಿ-ಬೆಳೆಯುವಲ್ಲಿ ಯಶಸ್ವಿ ಕಾರ್ಯಕ್ರಮವೆನಿಸಿದೆ.
ಪ್ರಸಕ್ತ ಸಾಲಿನ ವಚನ ವಿಜಯೋತ್ಸವವು 2021 ಫೆಬ್ರುವರಿ 25,26 ಮತ್ತು 27 ರಂದು ಒದಗಿಬಂದಿದೆ. ಆದರೆ ಕೋವಿಡ್-19 ಮಹಾಮಾರಿಯ ಹಿನ್ನೆಲೆಯಿಂದಾಗಿ ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುತ್ತಾ, ಸಾರ್ವಜನಿಕರ ಆರೋಗ್ಯ ಗಮನದಲ್ಲಿರಿಸಿಕೊಂಡು ಈ ವರ್ಷದ ವಚನ ವಿಜಯೋತ್ಸವವನ್ನು ಅತ್ಯಂತ ಸರಳವಾಗಿ ನೆರವೇರಿಸಲು ನಿರ್ಧರಿಸಲಾಗಿದೆ. ನಗರದ ಪವಿತ್ರ ಕ್ಷೇತ್ರ ಬಸವಗಿರಿಯಲ್ಲಿ ಪೂಜ್ಯಶ್ರೀ ಅಕ್ಕ ಅನ್ನಪೂರ್ಣತಾಯಿ ಮತ್ತು ಡಾ|| ಗಂಗಾಂಬಿಕೆ ಅಕ್ಕನವರ ನೇತ್ರತ್ವದಲ್ಲಿ ಮೇಲ್ಕಂಡ ದಿನಗಳಂದು ವಚನ ವಿಜಯೋತ್ಸವದ ಧಾರ್ಮಿಕ ವಿಧಿ-ವಿಧಾನಗಳನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಜರುಗಿಸಲಾಗುತ್ತದೆ. ಸಾರ್ವತ್ರಿಕ ಮೆರವಣಿಗೆಯನ್ನು ರದ್ದುಪಡಿಸಲಾಗಿದೆ. ಭಕ್ತಾದಿಗಳು ತಮ್ಮ-ತಮ್ಮ ಮನೆಗಳಲ್ಲೇ ಮೂರು ದಿನಗಳ ಕಾಲ ವಚನ ವಿಜಯೋತ್ಸವದ ಧಾರ್ಮಿಕ ಆಚರಣೆಗಳನ್ನು ಅಂದರೆ ಇಷ್ಟಲಿಂಗ ಯೋಗ, ಸಮಗ್ರ ಗುರುವಚನ ಪಾರಾಯಣ, ಧರ್ಮಗ್ರಂಥಕ್ಕೆ ಗೌರವಾರ್ಪಣೆ ಮುಂತಾದವುಗಳನ್ನು ಭಕ್ತಿಯಿಂದ ಆಚರಿಸಬೇಕೆಂದು ಕರೆ ನೀಡಲಾಗಿದೆ.
ಬೇರೆ-ಬೇರೆ ಆಯಾ ರಾಜ್ಯಗಳ/ಜಿಲ್ಲೆಗಳ/ಗ್ರಾಮಗಳ ಬಸವಭಕ್ತರು ಈ ಸಲ ತಮ್ಮ ತಮ್ಮ ಊರುಗಳಿಂದಲೇ ವಚನ ವಿಜಯೋತ್ಸವಕ್ಕೆ ಭಕ್ತಿ ಸಮರ್ಪಣೆ ಮಾಡಬೇಕೆಂದು ಕೋರಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button