Featured Story

ಬಿಗ್‌ಬಾಸ್ ಶೋನಲ್ಲಿ ಭೋವಿ ಜನಾಂಗಕ್ಕೆ ಅವಹೇಳನ ಆರೋಪ: ಸ್ಪರ್ಧಿ ತನಿಷಾ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಬಿಗ್‌ಬಾಸ್ ಶೋನಲ್ಲಿ ಭೋವಿ ಜನಾಂಗಕ್ಕೆ ಅವಹೇಳನ ಮಾಡಿದ ಆರೋಪದಡಿಯಲ್ಲಿ ಸ್ಪರ್ಧಿ ತನಿಷಾ ವಿರುದ್ಧ ಪ್ರಕರಣ ದಾಖಲಾಗಿದೆ.

ಕನ್ನಡದ ‘ಬಿಗ್‌ಬಾಸ್ ರಿಯಾಲಿಟಿ ಶೋ’ನಲ್ಲಿ ಸ್ಪರ್ಧಾಳುವಾಗಿದ್ದ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ್ದ ಪ್ರಕರಣ ಇಡೀ ರಾಜ್ಯಾದ್ಯಂತ ಇದು ವಿವಾದವಾಗಿ ಸುದ್ದಿಯಾಗಿತ್ತು. ಈ ಪ್ರಕರಣದಲ್ಲಿ ವರ್ತೂರು ಸಂತೋಷ್ ವಿರುದ್ಧ ಎಫ್‌ಐಆರ್ ದಾಖಲಿಸಿ ಜೈಲು ಶಿಕ್ಷೆ ಅನುಭವಿಸಿ ಮತ್ತೆ ರಿಯಾಲಿಟಿ ಶೋಗೆ ಬಂದಿದ್ದರು.

ಇದು ಇನ್ನೂ ಕೂಡ ಚರ್ಚೆಯಲ್ಲಿರುವಾಗಲೇ ಮತ್ತೊಂದು ಸ್ಪರ್ಧಾಳುವಾಗಿರುವ ತನಿಷಾ ವಿರುದ್ಧ ಭೋವಿ ಜನಾಂಗಕ್ಕೆ ಅವಹೇಳನ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ತನಿಷಾ ಅವರು, ಇನ್ನೋರ್ವ ಸ್ಪರ್ಧಾಳುವಾಗಿರುವ ಡ್ರೋನ್ ಪ್ರತಾಪ್ ಜೊತೆ ಮಾತನಾಡುವಾಗ ಭೋವಿ ಜನಾಂಗದ ಬಗ್ಗೆ ಅವಮಾನಕರ ಪದ ಬಳಸಿದ್ದಾರೆ ಎಂದು ಆರೋಪಿಸಿ, ಅಖಿಲ ಕರ್ನಾಟಕ ಭೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ.ಪದ್ಮಾ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಎಸ್‌ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ(ಅಟ್ರಾಸಿಟಿ)ಯ ಅನ್ವಯ ತನಿಷಾ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿ ಪದ ಬಳಕೆ ಮಾಡಿ ಬೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆ. ಹಾಗಾಗಿ, ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕು ಎಂದು ದೂರಿನಲ್ಲಿ ಆಗ್ರಹಿಸಿರುವ ಕುರಿತು ತಿಳಿದು ಬಂದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button