Featured StoryVijayapura

ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆ ನಂತರ ಗ್ಯಾರಂಟಿ ವಾಪಸ್ ಪಡೆಯಲಿದೆ: ಸಂಸದ ಜಿಗಜಿಣಗಿ ಭವಿಷ್ಯ

ವಿಜಯಪುರ : ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿವೆ ಲೋಕಸಭೆ ಚುನಾವಣೆ ನಂತರ ಗ್ಯಾರಂಟಿಗಳನ್ನು ತವಾಗಿಯೇ ಹಿಂದಕ್ಕೆ ತೆಗೆದುಕೊಳ್ಳುತ್ತಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಎಸ್.ಇ.ಪಿ.ಟಿ.ಎಸ್.ಪಿ ಗೆ ಮೀಸಲಾಗಿದ್ದ, 11 ಸಾವಿರ ಕೋಟಿ ಹಣವನ್ನು ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ಸದಾ ದಲಿತರ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ದಲಿತರಿಗೆ ಮಾಡಿರುವ ಮೋಸ ಅಲ್ಲವೇ? ಎಂದು ಪ್ರಶ್ನಿಸಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಬಡವರಿಗೆ ನೀಡಿರುವ ಗ್ಯಾರಂಟಿಗಳನ್ನು ವಾಪಸ್ ಪಡೆಯುತ್ತಾರೆ ಎಂದು ಕಾಂಗ್ರೆಸ್ ನವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ತನ್ನ 5 ಯೋಜನೆಗಳನ್ನು ತಾನಾಗಿಯೇ ವಾಪಸ್ ಪಡೆಯಲಿದೆ ಎಂದು ಹೊಸ ಬಾಂಬ್ ಸಿಡಿಸಿದರು.

1 ಕೋಟಿ ಸಹಿ ಅಭಿಯಾನ…
ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳು, ಸಂಘ-ಸಂಸ್ಥೆಗಳು ಸೇರಿದಂತೆ ಅನೇಕ ತಜ್ಞರ ಸಲಹೆ ಸೂಚನೆಗಳನ್ನು ಪಡೆದುಕೊಂಡು ಕೇಂದ್ರ ಸರ್ಕಾರ ಎನ್ಇಪಿ ಜಾರಿಗೋಳಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಇದನ್ನು ವಿರೋದಿಸುತ್ತಿದೆ. ಕಾಂಗ್ರೆಸ್ ನವರು ನಮ್ಮ ಸರ್ಕಾರ ಬಂದ್ರೆ, ನಾವು ಎನ್ಇಪಿ ರದ್ದು ಮಾಡುತ್ತೇವೆ ಎಂದು ಹೇಳುತ್ತಿರುವುದು ಅವರ ದಡ್ಡತನ. ಇದು ಕಾಂಗ್ರೆಸ್ಸಿಗರ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ಎನ್ಇಪಿ ಈ ದೇಶಕ್ಕೆ ಬಹಳಷ್ಟು ಅವಶ್ಯ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ. ಹಾಗಾಗಿಯೇ 1 ಕೋಟಿ ಸಹಿ ಅಭಿಯಾನಕ್ಕೆ ನಾವು ಚಾಲನೆ ನೀಡಿದ್ದೇವೆ. ಸಾರ್ವಜನಿಕರು ಇದಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಪರಿಹಾರದ ಹಣ ತೆಗೆದುಕೊಂಡು ಬನ್ನಿ ಎಂದು ಕಾಂಗ್ರೆಸ್ ನಾಯಕರು ಬಿಜೆಪಿ ಕಾರ್ಯಕರ್ತರಿಗೆ ಹೇಳುತ್ತಾರೆ. ಸಂವಿಧಾನದ ಬಗ್ಗೆ ಮಾತಾಡುವ ಕಾಂಗ್ರೆಸ್ನವರು ಪ್ರಧಾನ ಮಂತ್ರಿಗಳನ್ನು ಹೇಗೆ ಭೇಟಿಯಾಗಬೇಕು ಎನ್ನುವುದು ಗೊತ್ತಿಲ್ಲವೇ? ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಂತ್ರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಕೇಂದ್ರ ಸರ್ಕಾರದ ಜೊತೆಗೆ ಹೇಗೆ ವ್ಯವಹರಿಸಬೇಕು ಎನ್ನುವುದನ್ನು ತಿಳಿದುಕೊಳ್ಳಲಿ, ಹಾದಿ ಬೀದಿಯಲ್ಲಿ ನಿಂತು ಮಾತನಾಡುವುದನ್ನು ಬಿಟ್ಟು ಪರಿಹಾರ ತರುವ ಕೆಲಸ ಮಾಡಲಿ ಎಂದು ಹರಿಹಾಯ್ದರು.
ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಎನ್ಇಪಿಗೆ ಪರ್ಯಾಯವಾಗಿ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ. ಅದಕ್ಕೆ ಸಮಿತಿ ನೇಮಕವನ್ನು ಕೂಡ ಮಾಡಿದೆ. ಆ ಸಮಿತಿಯ ಅರ್ಧದಷ್ಟು ಸದಸ್ಯರು ಹೊರ ರಾಜ್ಯದವರು, ಎಸಿ ರೂಮನಲ್ಲಿ ಕುಳಿತು ಶಿಕ್ಷಣ ನೀತಿ ರೂಪಿಸಿದ್ದಾರೆ ಎಂದು ಸಾರ್ವಜನಿಕರಿಂದ ಅನಿಸಿಕೊಳ್ಳುವಂತಹ ಶಿಕ್ಷಣ ನೀತಿ ರೂಪಿಸದೆ, ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ತಜ್ಞರನ್ನು ಸಂಪರ್ಕಿಸಿ ಮಾಹಿತಿ ಸಲಹೆಗಳನ್ನು ಸ್ವೀಕರಿಸಿ ರಾಷ್ಟ್ರೀಯ ಶಿಕ್ಷಣ ನೀತಿಯ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.
ಮಕ್ಕಳ ಭವಿಷ್ಯ ಹಾಗೂ ಕರ್ನಾಟಕ ಶಿಕ್ಷಣ ನೀತಿಯ ಗುಣಮಟ್ಟ ಉಳಿಸುವ ಸಲುವಾಗಿ ಸಹಿ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ. ಮಕ್ಕಳಿಗೆ ಕೇವಲ ಶಿಕ್ಷಣ ನೀಡುವುದಲ್ಲ ಉದ್ಯೋಗ ಪಡೆದುಕೊಳ್ಳುವ ಕೌಶಲ್ಯವನ್ನು ಕೊಡಬೇಕು. ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ನೀಡಿ ಸ್ವಾವಲಂಭಿ ಬದುಕು ಸಾಗಿಸುವಂತಹ ಶಿಕ್ಷಣ ನೀತಿ ನಮ್ಮದಾಗಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ರಸ್ತೆ ಮೇಲೆ ನಿಂತು ಬಿಜೆಪಿ ನಾಯಕರು ಕೇಂದ್ರಕ್ಕೆ ಹೋಗಿ ಪರಿಹಾರ ತೆಗೆದುಕೊಂಡು ಬನ್ನಿ ಎಂದು ಹೇಳುತ್ತಿದ್ದಾರೆ. ಕಾಂಗ್ರೇಸ್ಸಿಗರಿಗೆ ಆಡಳಿತ ನಡೆಸುವ ಜ್ಞಾನ ಇಲ್ಲ. ಕೇಂದ್ರ ಸರ್ಕಾರಕ್ಕೆ ಸಂವಿಧಾನ ಬದ್ಧವಾಗಿ ಯಾರು ? ಹೇಗೆ ಪರಿಹಾರ ಕೇಳಬೇಕು ಎನ್ನುವುದನ್ನು ಮೊದಲು ತಿಳಿದುಕೊಳ್ಳಲಿ. ದರಿದ್ರ ಜನರ ಕೈಯಲ್ಲಿ ಆಡಳಿತ ಸಿಕ್ಕಿರುವುದು ನಮ್ಮ ದುರಂತ ಎಂದು ಕಿಡಿ ಕಾರಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಾಧ್ಯಮ ಸಲಹೆಗಾರ ವಿಜಯ ಜ್ಯೋಶಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button