
ನೇಜಾರು ಕೊಲೆ ಪ್ರಕರಣ: ಸಂತಾಪ ಸಭೆಗೆ ಆಗಮಿಸಿದ ಸಾವಿರಾರು ಜನರು
ಉಡುಪಿ, ನ.22:ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಸಂತೆಕಟ್ಟೆ ಕಲ್ಯಾಣಪುರದ ವೌಂಟ್ ರೋಸರಿ ಮಿಲ್ಲೆನಿಯಮ್ ಹಾಲ್ನಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಮನುಷ್ಯತ್ವದ ಕೊಲೆಯನ್ನು ಖಂಡಿಸಿ ನೇಜಾರಿನಲ್ಲಿ ಕ್ರೌರ್ಯಕ್ಕೆ ಬಲಿಯಾದ ಜೀವಗಳಿಗಾಗಿ ಸಂತಾಪ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಸಾವಿರಾರು ಜನ ಭಾಗವಹಿಸಿ ಸಂತ್ರಸ್ಥ ಕುಟುಂಬದ ನೋವಿನಲ್ಲಿ ಭಾಗಿಯಾದರು.
ಪ್ರಕರಣದ ಆರೋಪಿಯನ್ನು ಸಮಗ್ರವಾಗಿ ವಿಚಾರಣೆ ನಡೆಸಿ ಈ ಕೃತ್ಯದಲ್ಲಿ ಭಾಗಿಯಾದ ಅಥವಾ ಸಹಕರಿಸಿರಬಹುದಾದ ಇತರರನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಒತ್ತಾಯಿಸಲಾಯಿತು.
ಸಹಸ್ರಾರು ಸಂಖ್ಯೆಯಲ್ಲಿ ಸರ್ವಧರ್ಮಿಯರು ಪಾಲ್ಗೊಂಡ ಈ ಸಭೆಯಲ್ಲಿ ವಿವಿಧ ಠರಾವು ಮಂಡಿಸಿ, ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಸಲ್ಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ರಾಜ್ಯ ಸರಕಾರವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ನ್ನು ನೇಮಿಸಬೇಕು. ತ್ವರಿತ ಗತಿಯಲ್ಲಿ ವಿಚಾರಣೆ ಪೂರ್ಣಗೊಳಿಸಿ ಆರೋಪಿಗೆ ಶಿಕ್ಷೆ ಖಾತ್ರಿ ಪಡಿಸಲು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಬೇಕು. ಊಹೆಗಳು ಮತ್ತು ಕಪೋಲಕಲ್ಪಿತ ವರದಿಗಳನ್ನು ಪ್ರಕಟಿಸುವ ಮೂಲಕ ಮಾಧ್ಯಮಗಳು ಸಂತ್ರಸ್ಥ ಕುಟುಂಬದ ತೇಜೋವಧೆ ಮಾಡುವುದು ಹಾಗೂ ಮಾನಸಿಕ ಕಿರುಕುಳ ನೀಡುದನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
ಮುಂದಿನ ದಿನಗಳಲ್ಲಿ ಈ ರೀತಿಯ ಭೀಭತ್ಸ ಕೃತ್ಯಗಳು ನಡೆಯದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಆಯಾಕಟ್ಟಿನ ಜಾಗದಲ್ಲಿ ಸಿಸಿಟಿವಿ ಅಳವಡಿಸಬೇಕು. ಇಂತಹ ಕ್ರೂರ ಅಪರಾಧ ಗಳಿಗೆ ಪ್ರೇರಣೆ ನೀಡುವ ದ್ವೇಷ ಭಾಷಣಗಳಿಗೆ ತಕ್ಷಣ ಕಡಿವಾಣ ಹಾಕಬೇಕು. ಮನೆಗಳಲ್ಲಿ ಆಯುಧಗಳನ್ನು ಇರಿಸಿಕೊಳ್ಳಲು ಕರೆ ನೀಡುವ ಹಿಂಸಾ ಪ್ರಚೋದಕರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ನೀಡಬೇಕು ಎಂಬ ಠರಾವನ್ನು ಸಭೆಯಲ್ಲಿ ಮಂಡಿಸಲಾಯಿತು.
ಮುಖ್ಯ ಭಾಷಕಾರರಾಗಿ ಮಾತನಾಡಿದ ಯಾಸೀನ್ ಮಲ್ಪೆ, ಈ ಪ್ರಕರಣದಲ್ಲಿ ಜನರು ತೋರಿದ ಸಹನೆ, ಸೌಹರ್ದತೆಯ ಮಾದರಿಯನ್ನು ಪ್ರಶಂಸಿದರು.
ಕಲ್ಯಾಣಪುರ ವೌಂಟ್ ರೋಸರಿ ಚರ್ಚ್ನ ಧರ್ಮಗುರು ಫಾ.ರೋಕಿ ಡಿಸೋಜ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಸಂತ್ರಸ್ತ ಕುಟುಂಬದ ನೂರ್ ಮುಹಮ್ಮದ್, ಉದ್ಯಾವರ ನಾಗೇಶ್ ಕುಮಾರ್, ಎಂ.ಎ.ಗಫೂರ್, ಅಶ್ರಫ್ ಕೋಡಿಬೆಂಗ್ರೆ, ಮಹಾಬಲ ತೋಳಾರ್, ಪ್ರತ್ಯಕ್ಷದರ್ಶಿ ಅಟೋ ಚಾಲಕ ಶ್ಯಾಮ್, ನಿವೃತ್ತ ಪ್ರೊಫೆಸರ್ ಹಿಲ್ಡಾ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಬಾಲಕೃಷ್ಣ ಶೆಟ್ಟಿ, ಸುಂದರ್ ಮಾಸ್ತರ್, ಅಬೂಬಕ್ಕರ್ ನೇಜಾರ್, ಜನಾರ್ದನ ತೋನ್ಸೆ, ದಿನಕರ ಹೆರೂರು, ರಮೇಶ್ ಕಾಂಚನ್ ಸಂತಾಪ ನುಡಿಗಳನ್ನಾಡಿದರು. ಡಾ.ಸುನೀತಾ ಶೆಟ್ಟಿ ಸ್ವರಚಿತ ಕವನವನ್ನು ವಾಚನ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರು.
ಒಕ್ಕೂಟದ ಉಡುಪಿ ತಾಲೂಕು ಅಧ್ಯಕ್ಷ ಎಸ್.ಎಂ.ಇರ್ಷಾದ್ ನೇಜಾರ್ ಅಧ್ಯಕ್ಷತೆ ವಹಿಸಿದ್ದರು. ವೌಲಾನ ಆದಿಲ್ ನದ್ವಿ ಕುರಾನ್ ಪಠಿಸಿದರು. ಶೇಖ್ ಸಲಾಹುದ್ದೀನ್ ಸ್ವಾಗತಿಸಿದರು. ಟಿ.ಎಂ.ಜಫ್ರುಲ್ಲಾ ಹೂಡೆ ವಂದಿಸಿದರು. ಯಾಸೀನ್ ಕೋಡಿ ಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು





