
ನೇಜಾರು ಕೊಲೆ ಪ್ರಕರಣ: ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಕೃತ್ಯ ನಡೆದ ಮನೆಗೆ ಭೇಟಿ
ಉಡುಪಿ, ನ.28: ನೇಜಾರು ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಇಂದು ನೇಜಾರಿನ ತೃಪ್ತಿ ಲೇಔಟ್ನಲ್ಲಿರುವ ಕೃತ್ಯ ನಡೆದ ಮನೆಗೆ ಇಂದು ಭೇಟಿ ನೀಡಿದ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಸಂತ್ರಸ್ತ ನೂರ್ ಮುಹಮ್ಮದ್, ಅವರ ಸಂಬಂಧಿಕರಾದ ಅಶ್ರಫ್ ಕೆ., ಇಕ್ಬಾಲ್ ಹೈಕಾಡಿ ಅವರನ್ನು ಭೇಟಿ ಮಾಡಿ ಕೃತ್ಯದ ಮಾಹಿತಿಯನ್ನು ಪಡೆದು ಕೊಂಡರು. ಬಳಿಕ ಮಾತನಾಡಿದ ಅವರು, ಪೊಲೀಸರು ಸಮಗ್ರ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿ, ವರ್ಷದೊಳಗೆ ತ್ವರಿತ ನ್ಯಾಯಾಲಯದ ಮೂಲಕ ವಿಚಾರಣೆ ಪೂರ್ಣಗೊಳಿಸಿ ಆರೋಪಿಗೆ ಗಲ್ಲುಶಿಕ್ಷೆ ಕೊಡಿಸಬೇಕು ಎಂದು ತಿಳಿಸಿದರು.ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸಲಹೆ ಕೊಡುತ್ತೇನೆ ಮತ್ತು ಆಯೋಗದ ವತಿಯಿಂದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಪತ್ರ ಬರೆದು ಶಿಫಾರಸ್ಸು ಮಾಡುತ್ತೇನೆ. ಈ ವಿಚಾರದಲ್ಲಿ ಹಿಂದು ಮುಸ್ಲಿಮರು ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಈ ಮೂಲಕ ಆ ಕುಟುಂಬದವರಿಗೆ ನ್ಯಾಯ ದೊರಕಿಸಲು ಸಾಧ್ಯವಾಗುತ್ತದೆ ಎಂದರು.
ಸಂತ್ರಸ್ತ ನೂರ್ ಮುಹಮ್ಮದ್ ಅವರ ಹಿರಿಯ ಮಗ ಮುಹಮ್ಮದ್ ಅಸಾದ್ಗೆ ಪರಿಹಾರದ ಆಧಾರದ ಮೇರೆಗೆ ಪೊಲೀಸ್ ಇಲಾಖೆಯಲ್ಲಿ ನೇರ ನೇಮಕಾತಿ ಮಾಡಿಕೊಳ್ಳಬೇಕು. ಆತನಿಗೆ ಮೊದಲು ಎಸ್ಸೈ ಹುದ್ದೆ ಕೊಡಬೇಕು. ಮುಂದೆ ಆತ ಒಳ್ಳೆಯ ಎಸ್ಪಿ ಕೂಡ ಆಗಬಹುದು. ಆತನಿಗೆ ನಾನು ತರಬೇತಿ ನೀಡುತ್ತೇನೆ ಎಂದು ಅವರು ಹೇಳಿದರು.
ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಪತ್ರ ಶಿಫಾರಸ್ಸು ಮಾಡಲಾಗುವುದು ಎಂದ ಅವರು, ಈ ಪ್ರಕರಣದ ಮೇಲ್ವಿಚಾರಣೆಯನ್ನು ಮಂಗಳೂರು ಪಶ್ಚಿಮ ವಲಯದ ಐಜಿಪಿಯವರು ವಹಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಮಾನಸಿಕವಾಗಿ ಜರ್ಜರಿತರಾದ ನೂರ್ ಮುಹಮ್ಮದ್ ಸಾಂತ್ವಾನ ಹೇಳಲು ಬಂದ ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಅವರ ಮುಂದೆಯೇ ಕುಸಿದು ಬಿದ್ದು ಅಸ್ವಸ್ಥಗೊಂಡರು.
ವಕ್ಫ್ ಉಡುಪಿ ಜಿಲ್ಲಾ ಸಲಹಾ ಮಂಡಳಿ ಅಧ್ಯಕ್ಷ ಅಬ್ದುಲ್ ಮುತ್ತಾಲಿಬ್, ಮಾಜಿ ಅಧ್ಯಕ್ಷ ಯಾಹ್ಯಾ ನಕ್ವಾ, ಉಡುಪಿ ಡಿವೈಎಸ್ಪಿ ಪಿ.ಕೆ.ದಿನಕರ್, ಮುಖಂಡರಾದ ಎಂ.ಎ.ಗಫೂರ್, ಸಲೀಂ ಅಂಬಾಗಿಲು, ಉಡುಪಿ ನಮ್ಮ ನಾಡ ಒಕ್ಕೂಟದ ಜಿಲ್ಲಾಧ್ಯಕ್ಷ ಮುಸ್ತಾಕ್ ಅಹ್ಮದ್, ಕೇಂದ್ರ ಸಮಿತಿ ಸಂಘಟನ ಕಾರ್ಯದರ್ಶಿ ಹುಸೇನ್ ಹೈಕಾಡಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಝಹಿರ್ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು




