
Rajasthan Assembly Elections Result 2023: ಕಾಂಗ್ರೆಸ್ – ಬಿಜೆಪಿ ಟೈಟ್ ಫೈಟ್!
ರಾಜಸ್ಥಾನ ರಾಜ್ಯದ ವಿಧಾನಸಭಾ ಚುನಾವಣೆ ಹಲವು ಕಾರಣಗಳಿಂದಾಗಿ ಗಮನ ಸೆಳೆದಿದೆ. ಈ ರಾಜ್ಯದ ಮತದಾರ ಒಂದೇ ಪಕ್ಷಕ್ಕೆ ಎರಡನೇ ಅಥವಾ ಮೂರನೇ ಬಾರಿ ಅಧಿಕಾರ ನೀಡಿದ ಉದಾಹರಣೆಗಳಿಲ್ಲ. ಹೀಗಾಗಿ, ಇಲ್ಲಿನ ರಾಜಕೀಯ ಸಂಪ್ರದಾಯದಂತೆ ಈ ಬಾರಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದೇ ಅನ್ನೋ ನಿರೀಕ್ಷೆ ಇತ್ತು. ಇದಕ್ಕೆ ಪೂರಕವಾಗಿ ಮತಗಟ್ಟೆ ಸಮೀಕ್ಷೆಗಳೂ ಬಿಜೆಪಿಗೆ ಜೈ ಎಂದಿದ್ದವು. ಇದೀಗ ಮತ ಎಣಿಕೆಯ ಆರಂಭದಲ್ಲೇ ಬಿಜೆಪಿ, ಕಾಂಗ್ರೆಸ್ ಮಧ್ಯೆ ಟೈಟ್ ಫೈಟ್ ಏರ್ಪಟ್ಟಿದೆ.

ಪಂಚ ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿರುವ ರಾಜ್ಯಗಳ ಪೈಕಿ ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿರುವ ರಾಜಸ್ಥಾನ ವಿಧಾನಸಭಾ ಚುನಾವಣೆ ಅಖಾಡದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಭಾರೀ ಜಿದ್ದಾಜಿದ್ದಿ ಏರ್ಪಟ್ಟಿದೆ. ಎರಡೂ ಪಕ್ಷಗಳು ಬಹುಮತಕ್ಕಾಗಿ ಪೈಪೋಟಿ ನಡೆಸ್ತಿವೆ.
ಒಟ್ಟು 200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಬಹುಮತಕ್ಕೆ 101 ಸ್ಥಾನಗಳನ್ನು ಗಳಿಸೋದು ಅತ್ಯಗತ್ಯವಾಗಿದೆ.
ನವೆಂಬರ್ 30 ರಂದು ಪಂಚ ರಾಜ್ಯ ವಿಧಾನಸಭೆಯ ಕೊನೆಯ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಮತಗಟ್ಟೆ ಸಮೀಕ್ಷೆ ಹೊರ ಬಿದ್ದಿತ್ತು. ಈ ಸಮೀಕ್ಷೆಗಳು ಬಿಜೆಪಿಗೆ ಬಹುಮತ ಸಿಗಬಹುದು ಎಂದೇ ಅಂದಾಜಿಸಿದ್ದವು. ರಾಜಸ್ಥಾನ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ವಸುಂಧರಾ ರಾಜೆ ಸಾರಥ್ಯದ ಬಿಜೆಪಿ ಮೇಲುಗೈ ಸಾಧಿಸಲಿವೆ ಎಂದೇ ಮತಗಟ್ಟೆ ಸಮೀಕ್ಷಾ ಸಂಸ್ಥೆಗಳು ಅವಲೋಕನ ನಡೆಸಿದ್ದವು. ಇದಕ್ಕೆ ಪೂರಕವಾಗಿ ಚುನಾವಣಾ ಮತ ಎಣಿಕೆ ವೇಳೆಯಲ್ಲೂ ಬಿಜೆಪಿಗೆ ಹೆಚ್ಚಿನ ಸಂಖ್ಯಾ ಬಲ ಸಿಗುತ್ತಿದೆ.
ಬೆಳಿಗ್ಗೆ 10: 18 AMರ ಹೊತ್ತಿಗೆ 199 ಸ್ಥಾನಗಳಲ್ಲಿ ಮತ ಎಣಿಕೆ ಆರಂಭವಾಗಿದ್ದು, 74ರಲ್ಲಿ ಕಾಂಗ್ರೆಸ್, ಹಾಗೂ 106 ರಲ್ಲಿ ಬಿಜೆಪಿ ಹಾಗೂ 18 ಸ್ಥಾನದಲ್ಲಿ ಇತರೆ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿವೆ.
ಕಾಂಗ್ರೆಸ್ – ಬಿಜೆಪಿ ಸಮಬಲ ಸಾಧಿಸಿದರೆ ಪಕ್ಷೇತರರೇ ನಿರ್ಣಾಯಕ!
ಒಂದು ವೇಳೆ ರಾಜಸ್ಥಾನ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಸಮಬಲ ಸಾಧಿಸಿದರೆ ಬಿಎಸ್ಪಿ ಹಾಗೂ ಪಕ್ಷೇತರ ಶಾಸಕರು ಕಿಂಗ್ ಮೇಕರ್ ಆಗಲಿದ್ದಾರೆ. ರಾಜಸ್ಥಾನ ರಾಜ್ಯದ ವಿಧಾನಸಭೆಯಲ್ಲಿ ಬಹುಮತ ಗಳಿಸಲು 101 ಸ್ಥಾನಗಳ ಅಗತ್ಯತೆ ಇದ್ದು, ಈ ಪೈಕಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಎಷ್ಟು ಸ್ಥಾನಗಳನ್ನು ಗಳಿಸಲಿವೆ ಅನ್ನೋದು ಭಾರೀ ಕುತೂಹಲ ಕೆರಳಿಸಿದೆ.




