
ಯಡಿಯೂರಪ್ಪ ಮೇಲೆ ಮತ್ತೆ ಹೆಚ್ಚಿದ ಮೀಸಲಾತಿ ಒತ್ತಡ; ಮಹತ್ವದ ಸಭೆ ನಡೆಸಿದ ಮಠಾಧೀಶರು…
ಬೆಂಗಳೂರು,ಫೆ.13:- ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುತ್ತಿರುವ ಬೆನ್ನಲ್ಲೇ ಯಡಿಯೂರಪ್ಪ ಪರವಾಗಿ ನಿಂತಿರುವ ಮಠಾಧೀಶರ ಬಣ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ತಿರುಗಿಬಿದ್ದಿದೆ. ಈ ಬೆಳವಣಿಗೆ ನಡುವೆ ವಿರಕ್ತ ವೀರಶೈವ ಸಮುದಾಯದ ಎಲ್ಲಾ ಮಠಗಳು ಒಂದೇ ಎಂಬುದನ್ನು ಎತ್ತಿ ತೋರಿಸಲು ನಗರದಲ್ಲಿಂದು ಮಠಾಧೀಶರು ಮಹತ್ವದ ಸಭೆ ನಡೆಸಿದ್ದಾರೆ.
ಉಜ್ಜೈನಿ ಮತ್ತು ಶ್ರೀಶೈಲಪೀಠದ ಜಗದ್ಗುರುಗಳ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ವೀರಶೈವ ಲಿಂಗಾಯಿತ ಅಭಿವೃದ್ದಿ ಮಂಡಳಿ ಅಧ್ಯಕ್ಷ ಪರಮಶಿವಯ್ಯ, ಕ್ರೆಡಿಲ್ ಅಧ್ಯಕ್ಷ ರುದ್ರೇಶ್ ಸೇರಿದಂತೆ ನೂರಕ್ಕೂ ಹೆಚ್ಚು ಸ್ವಾಮೀಜಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪರಮಶಿವಯ್ಯ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೆಚ್ಚು ಒತ್ತಡ ಹೇರಿ ಹಿಂಸೆ ಕೊಡಲಾಗುತ್ತಿದೆ ಎಂದು ಆರೋಪಿಸಿದರು.
ಲಿಂಗಾಯಿತ ಅಭಿವೃದ್ದಿ ಮಂಡಳಿ ಅಧ್ಯಕ್ಷನಾಗಿ ನಾನು ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು. ಪಂಚಮಸಾಲಿ ಸಮಾಜಕ್ಕೆ ಸೇರಿದನಾದ ನಾನು ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟವನ್ನು ವಿರೋಧಿಸುವುದಿಲ್ಲ. ವೀರಶೈವ ಲಿಂಗಾಯಿತರ 106 ಒಳಪಂಗಡಗಳಿಗೆ ಒಬಿಸಿ ಮಾನ್ಯತೆ ದೊರೆತಿದೆ. ಹಾಗಾದರೆ ಉಳಿದವರ ಕಥೆ ಏನು ಎಂದು ನಾವು ಕೇಳಬೇಕಾಗಿದೆ ಎಂದರು.
ಎಲ್ಲಾ ಪಂಚಪೀಠಾಧೀಶ್ವರರು ಹಾಗು ವಿರಕ್ತ ಮಠಗಳ ಪೀಠಾಧೀಶ್ವರರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಮಾಜದ ಒಗ್ಗಟ್ಟಿನ ದೃಷ್ಟಿಯಿಂದ ಎಲ್ಲ ಒಂದೇ ಎಂದು ತೋರಿಸಲು ಈ ಸಭೆ ಸೇರಿಸಿದ್ದೇವೆ ಎಂದು ಸಮರ್ಥಿಸಿಕೊಂಡರು.
ಕ್ರೆಡಿಲ್ ಅಧ್ಯಕ್ಷ ರುದ್ರೇಶ್ ಮಾತನಾಡಿ, ಮೀಸಲಾತಿ ಹೋರಾಟದ ವಿಷಯದಲ್ಲಿ ವೀರಶೈವ-ಲಿಂಗಾಯಿತರು ಗೊಂದಲಕ್ಕೆ ಒಳಗಾಗಿದ್ದಾರೆ. ಮೀಸಲಾತಿ ಹೋರಾಟದ ಕಾರಣಕ್ಕೆ ವೀರಶೈವಲಿಂಗಾಯಿತ ಸಮಾಜ ಒಡೆಯಬಾರದು ಎಂದು ಒತ್ತಿ ಹೇಳಿದರು.
ತಿಂಗಳ ಹಿಂದೆ ವಚನಾನಂದ ಶ್ರೀಗಳನ್ನು ಭೇಟಿಯಾದಾಗ ವೀರಶೈವ-ಲಿಂಗಾಯಿತರು ಒಂದಾಗಿರಬೇಕು ಎಂದು ಸಲಹೆ ಮಾಡಿದ್ದರು. ಜಯಮೃತ್ಯುಂಜಯಸ್ವಾಮೀಜಿ ಹಾಗೂ ವಚನಾನಂದ ಶ್ರೀಗಳು ಹೋರಾಟ ಮಾಡುತ್ತಿರುವುದು ಸರಿಯಾಗಿದೆ. ಆದರೆ ಅವರು ಒಂದು ಪಂಗಡದ ಪರವಾಗಿ ಮಾತ್ರ ಹೋರಾಟ ಮಾಡುತ್ತಿರುವುದು ನೋವು ತಂದಿದೆ ಎಂದರು.
ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಯಡಿಯೂರಪ್ಪ ಅವರು ವೀರಶೈವಲಿಂಗಾಯಿತರು ಎಂಬ ಕಾರಣಕ್ಕೆ ನಮ್ಮನ್ನು ಒಬಿಸಿ ಗೆ ಸೇರ್ಪಡೆ ಮಾಡುವ ಶಿಫಾರಸ್ಸು ಮಾಡಿ ಎಂದು ನಾವು ಕೇಳುವುದಿಲ್ಲ. ವೀರಶೈವ ಲಿಂಗಾಯಿತರ ಪರಿಸ್ಥಿತಿಯನ್ನು ಅವಲೋಕನ ಮಾಡಿ ಶಿಫಾರಸ್ಸು ಮಾಡಿ ಎಂದು ಒತ್ತಾಯಿಸುತ್ತಿದ್ದೇವೆ ಎಂದರು.
ಸಿಂದಗಿ ಸಾರಂಗಮಠದ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯಿತರನ್ನು ಒಡೆಯಲು ದೊಡ್ಡ ಹುನ್ನಾರ ನಡೆಯುತ್ತಿದೆ ಎಂದು ಎಚ್ಚರಿಸಿದರು.
ಚಂದ್ರಶೇಖರ್ ಶಿವಾಚಾರ್ಯರು ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎಂಬುದು ನಮ್ಮ ಹಕ್ಕೊತ್ತಾಯ ಎಂದರು.




