
ಹುಡುಗಾಟಿಕೆಯ ಮಾತುಗಳಿಗೆಲ್ಲ ಪ್ರತಿಕ್ರಿಯೆ ಬರುವುದಿಲ್ಲ: ಶಾಸಕ ಯತ್ನಾಳಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿರುಗೇಟು
ವಿಜಯಪುರ: ಆರೋಪಗಳಲ್ಲಿ ಸತ್ಯಾಂಶ ಇದ್ದರೆ ಪ್ರತಿಕ್ರಿಯೆಗಳು ಬರುತ್ತವೆ ಹುಡುಗಾಟಿಕೆಯ ಮಾತುಗಳಿಗೆಲ್ಲ ಪ್ರತಿಕ್ರಿಯೆ ಬರುವುದಿಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿರುಗೇಟು ನೀಡಿದರು.
ವಿಜಯಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನೇರವಾಗಿ ಸ್ಪಷ್ಟವಾಗಿ ಹೇಳುತ್ತಿದ್ದೇನೆ ನನಗೆ ಯಾವ ಭಯವು ಇಲ್ಲ. ನನಗೆ ಜವಾಬ್ದಾರಿ ನೀಡಿರುವುದು ಬಿಜೆಪಿ ಪಕ್ಷದ ವರಿಷ್ಠರು, ಜೆಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಅವರು ನನಗೆ ಈ ಜವಾಬ್ದಾರಿಯನ್ನು ನೀಡಿದ್ದಾರೆ. ಈ ಜವಾಬ್ದಾರಿಯನ್ನು ಯಡಿಯೂರಪ್ಪನವರು ನನಗೆ ನೀಡಿಲ್ಲಾ. ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ್ದಕ್ಕೆ ರಾಜ್ಯದ ಬಿಜೆಪಿ ಕಾರ್ಯಕರ್ತರು ಸಂತೋಷವಾಗಿದ್ದಾರೆ. ಈಶ್ವರಪ್ಪ, ಸಿಟಿ ರವಿ ಸೇರಿದಂತೆ ಎಲ್ಲ ಹಿರಿಯ ನಾಯಕರು ನನ್ನ ಜೊತೆ ಕೈಜೋಡಿಸಿದ್ದಾರೆ, ನನಗೆ ಆಶಿರ್ವಾದ ಮಾಡಿದ್ದಾರೆ. ಹೊಸ ವರ್ಷದ ಹೊಸ್ತಿಲಲ್ಲಿ ಹಳೆ ವಿಚಾರಗಳೆನ್ನೆಲ್ಲ ಬದಿಗಿಟ್ಟು ಹೆಚ್ಚು ಉತ್ಸಾಹದಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷವನ್ನು ಮುನ್ನಡೆಸುತ್ತೇನೆ, ಒಂದಿಷ್ಟು ಪಕ್ಷದಲ್ಲಿ ಮನಸ್ಥಾಪಗಳಿವೆ ಅವುಗಳನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಇನ್ನು ಕೆಂದ್ರಕ್ಕೆ ಹೋಗಿ ನಾವಾಗಲಿ ನಮ್ಮ ಪಕ್ಷದ ಮುಖಂಡರಾಗಲಿ ಯಾರ ಬಗ್ಗೆಯೂ ಚಾಡಿ ಹೇಳುವುದು, ಕಂಪ್ಲೆಂಟ್ ಕೊಡುವುದು ಇದು ವರೆಗೂ ಮಾಡಿಲ್ಲ, ಮತ್ತು ಅದರ ಅವಶ್ಯಕತೆಯೂ ನಮಗಿಲ್ಲ. ಹಾಗೂ ಮುಂದೆ ಸಂದರ್ಭ ಹೇಗೆ ಸೃಷ್ಟಿ ಆಗುತ್ತೋ ಹಾಗೆ ಕೇಂದ್ರದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.
ಇನ್ನು ಯಡಿಯೂರಪ್ಪನವರ ಮೇಲೆ ಅಥವಾ ಯಡಿಯೂರಪ್ಪನವರ ಕುಟುಂಬದ ಮೇಲೆ ರಾಜ್ಯ ಸರ್ಕಾರ ಅನುಕಂಪ ತೋರಿಸುವ ಅವಶ್ಯಕತೆ ಇಲ್ಲ, ಆರೋಪ ಮಾಡಿರುವುದರಲ್ಲಿ ಸತ್ಯಾಂಶ ಇದ್ದರೆ ರಾಜ್ಯ ಸರ್ಕಾರ ಸಂಬಂಧಪಟ್ಟವರಿಂದ ದಾಖಲೆ ಪಡೆದುಕೊಂಡು ತೀರ್ಮಾನ ಮಾಡಲಿ ಅದರ ಬಗ್ಗೆ ನಮಗೇನು ಭಯವಿಲ್ಲ ಎಂದರು.




