
ಬಹು ಪ್ರಕರಣದ ಆರೋಪಿ ಶ್ರೀಕಾಂತ್ ಪೂಜಾರಿ ಜಾಮೀನು ಆದೇಶ ಇಂದು, ಜೈಲು ಭವಿಷ್ಯ ನಿರ್ಧಾರ | ಬಿಜೆಪಿ ಬಿಡುಗಡೆಗೆ ಆಗ್ರಹಿಸುತ್ತಿರುವ ಆರೋಪಿ
ಬೆಂಗಳೂರು: ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ 1992ರಲ್ಲಿ ದೇಶಾದ್ಯಂತ ನಡೆದಿದ್ದ ಗಲಭೆಗಳ ವೇಳೆ ಹುಬ್ಬಳ್ಳಿಯಲ್ಲಿ ಸಂಭವಿಸಿದ್ದ ಕೋಮುಗಲಭೆ ಪ್ರಕರಣ ಸೇರಿದಂತೆ ಹಲವು ಸಮಾಜ ಘಾತುಕ ಕೃತ್ಯದ ಆರೋಪಿ ಶ್ರೀಕಾಂತ ಪೂಜಾರಿ ವಿರುದ್ಧದ ಜಾಮೀನು ಅರ್ಜಿಯ ಆದೇಶವನ್ನು ಹುಬ್ಬಳ್ಳಿ ನ್ಯಾಯಾಲಯವು ಶುಕ್ರವಾರ ಪ್ರಕಟಿಸಲಿದೆ.
ಕಾಂತೇಶ್ ಅಲಿಯಾಸ್ ಶ್ರೀಕಾಂತ್ ಅಲಿಯಾಸ್ ಕಾಂತ್ಯ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಗುರುವಾರ ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ ಬಿ. ಅವರು ನಡೆಸಿದರು.
ತನಿಖಾಧಿಕಾರಿಯ ಆಕ್ಷೇಪಣೆಯ ಜೊತೆಗೆ ಸರ್ಕಾರಿ ಅಭಿಯೋಜಕಿ ಅವರು ಆಕ್ಷೇಪಣೆ ಸಲ್ಲಿಸಿದರು. ಅರ್ಜಿದಾರರ ಪರ ವಕೀಲರು 23.04.1996ರ ಪ್ರಮಾಣೀಕೃತ ತೀರ್ಪಿನ ಪ್ರತಿಯ ಜೊತೆಗೆ ಮೆಮೊ ಸಲ್ಲಿಸಿದರು. ಉಭಯ ಪಕ್ಷಕಾರರ ವಾದ ಆಲಿಸಲಾಗಿದೆ. ಜನವರಿ 5ಕ್ಕೆ ಆದೇಶ ಕಾಯ್ದಿರಿಸಲಾಗಿದೆ”ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದರು.
ಈ ನಡುವೆ ಶ್ರೀಕಾಂತ್ ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ. ಈಗ ಜಾಮೀನು ನೀಡಿದರೆ ನ್ಯಾಯಾಲಯಕ್ಕೆ ಗೈರಾಗುವ ಸಾಧ್ಯತೆ ಇರುತ್ತದೆ. ಶ್ರೀಕಾಂತ್ ಅವರ ವಿರುದ್ಧ ಹುಬ್ಬಳ್ಳಿಯ ವಿವಿಧ ಠಾಣೆಗಳಲ್ಲಿ 13 ಕ್ರಿಮಿನಲ್ ಪ್ರಕರಣ ಹಾಗೂ 3 ಮುಂಜಾಗ್ರತಾ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು.




