Uttara Kannada

ಎಂಡೋಸಲ್ಫಾನ್ ಎಲ್ಲಿ ಹೂತಿಡಲಾಗಿದೆ ಎಂದು ಸಮಗ್ರ ತನಿಖೆ ಆಗಲಿ ; ಸ್ಕೂಡ್ ವೇಸ್ ಸಂಸ್ಥೆಯ ಸ್ಥಾಪಕ ನಿರ್ದೇಶಕರ ಆಗ್ರಹ*

ಕಾರವಾರ: ಉತ್ತರಕನ್ನಡ ಸೇರಿದಂತೆ ರಾಜ್ಯದ ಕರಾವಳಿಯಲ್ಲಿ ಗೇರು ಅಭಿವೃದ್ಧಿಗೆ ಪೂರಕವಾಗಿ ಸಿಂಪಡಿಸಿ ಬಾಕಿ ಉಳಿದಿದ್ದ ಎಂಡೋಸಲ್ಫಾನ್ ಕ್ರಿಮಿನಾಶಕವನ್ನು ಹೇಗೆ ವಿಲೇವಾರಿ ಮಾಡಲಾಗಿದೆ ಎಂಬ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಸ್ಕೊಡ್‌ವೆಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ವೆಂಕಟೇಶ ನಾಯ್ಕ ಆಗ್ರಹಿಸಿದರು.

ಕಾರವಾರ ಪತ್ರಿಕಾಭನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಮಾಡಿದ ಅವರು ಕರ್ನಾಟಕ ಗೇರು ಅಭಿವೃದ್ಧಿ ನಿಗಮವು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಏಳು ತಾಲೂಕುಗಳಲ್ಲಿ ಸುಮಾರು 11,794.23 ಹೆಕ್ಟೇರ್ ಗೇರು ನೆಡುತೋಪುಗಳಿಗೆ 1986 ರಿಂದ 2011 ರ ಅವಧಿಯಲ್ಲಿ ಗೇರುಬೀಜದ ಇಳುವರಿಗೆ ಅಡ್ಡಿಯಾಗುತ್ತಿದ್ದ ಟೀ ಸೊಳ್ಳೆಗಳನ್ನು ನಾಶಪಡಿಸಲು ನಿರಂತರವಾಗಿ ವರ್ಷಕ್ಕೆ ಎರಡು ಬಾರಿಯಂತೆ ಒಟ್ಟೂ 57.000 ಲೀಟರ್ ವಿಷಕಾರಿ ಎಂಡೋಸಲ್ಫಾನ್ ಹಾಗೂ ಇತರ ಕ್ರಿಮಿನಾಶಕಗಳನ್ನು ಸಿಂಪಡಿಸಿದೆ. ಆದರೆ ನಿಗಮವು ನೀಡಿದ ದಾಖಲೆಗಳ ಪ್ರಕಾರ ಒಟ್ಟೂ ಖರೀದಿಸಲಾದ ಕ್ರಿಮಿನಾಶಕಗಳ ಪ್ರಮಾಣ ಹಾಗೂ ಬಳಕೆ ಮಾಡಲಾದ ಪ್ರಮಾಣಕ್ಕೆ ಭಾರೀ ಪ್ರಮಾಣದ ವ್ಯತ್ಯಾಸವಿದೆ.

ಮಾಲಿನ್ಯ ನಿಯಂತ್ರಣ ಮಂಡಳಿಯು ಹಸಿರು ನ್ಯಾಯ ಪೀಠಕ್ಕೆ ನೀಡಿದ ವರದಿಯಲ್ಲಿ 778 ಬ್ಯಾರೆಲ್‌ ಕ್ರಿಮಿನಾಶಕ ಸಿಂಪಡಿಸಲಾಗಿತ್ತು. ಆದರೆ ಗೇರು ಅಭಿವೃದ್ಧಿ ನಿಗಮದ ಅಧಿಕಾರಿಗಳು ಕೇವಲ 20 ಬ್ಯಾರೆಲ್‌ಗಳನ್ನು ಮಾತ್ರ ತೋರಿಸಿದ್ದು ಉಳಿದ ಬ್ಯಾರೆಲ್‌ಗಳು ಏನಾದವು ಎಂಬ ಬಗ್ಗೆ ಮಾಹಿತಿ ಇಲ್ಲ. ಇಲಾಖೆಯ ಕೆಲವು ಸಿಬ್ಬಂದಿಗಳು ಹೇಳುವಂತೆ ಎಂಡೋಸಲ್ಫಾನ್ ಕ್ರಿಮಿನಾಶಕದ ಬಗ್ಗೆ ಆಕ್ಷೇಪಗಳು ಬರುತ್ತಿದ್ದಂತೆ, ಬಾಕಿ ಇದ್ದ ಕ್ರಿಮಿನಾಶಕ ಮತ್ತು ಅದರ ದಾಸ್ತಾನು ಪರಿಕರಗಳನ್ನು ಭೂಮಿಯಲ್ಲಿ ಹೂತಿದ್ದೇವೆ ಎಂದು ಹೇಳುತ್ತಿದ್ದಾರೆ. ಎಂಡೋಸಲ್ಫಾನ್ ಬಾಧಿತರ ಪುನರ್‌ವಸತಿ ರಕ್ಷಣೆಗಾಗಿ ಹೋರಾಟ ನಡೆಸುತ್ತಲೇ ಬಂದಿದ್ದ ಉಡುಪಿಯ ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶಾನಭಾಗರವರು ಹಸಿರು ನ್ಯಾಯಪೀಠಕ್ಕೆ ಸಲ್ಲಿಸಿದ ದೂರು ಅರ್ಜಿಯನ್ನು ಪುರಸ್ಕರಿಸಿದ ಹಸಿರು ನ್ಯಾಯಪೀಠವು ಕೇಂದ್ರ, ಕರ್ನಾಟಕ, ಕೇರಳ ಸರ್ಕಾರ, ಉಭಯ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್ ನೀಡಿ ಅಕ್ರಮವಾಗಿ ಹೂಳಲಾಗಿದ್ದ ಎಂಡೋಸಲ್ಫಾನ್ ತೆರವಿಗೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ನೋಟೀಸ್ ಜಾರಿ ಮಾಡಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಹಸಿರು ನ್ಯಾಯ ಪೀಠಕ್ಕೆ ವರದಿ ಸಲ್ಲಿಸಿದೆ ಎಂದರು.

ಎಂಡೋಸಲ್ಫಾನ್ ವಿಷಕಾರಿ ಕ್ರಿಮಿನಾಶಕ ಸಿಂಪಡಣೆಯಿಂದ ದಕ್ಷಿಣ ಕನ್ನಡದಲ್ಲಿ 3,607 ಜನ ಉಡುಪಿ ಜಿಲ್ಲೆಯಲ್ಲಿ 1,514 ಜನ, ಉತ್ತರ ಕನ್ನಡ ಜಿಲ್ಲೆಯಲ್ಲಿ 1,793 ಜನ, ಸೇರಿದಂತೆ ಒಟ್ಟೂ 6,914 ಜನರು ಬಹುವಿಧದ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆಂದು ದಾಖಲೆಗಳು ಹೇಳುತ್ತವೆ. ಆದರೆ ಗೇರು ನೆಡುತೋಪಿನ 5 ಕಿ.ಮೀ.ಸುತ್ತಳತೆಯಲ್ಲಿ ನಡೆಸಲಾದ ಸಮೀಕ್ಷೆಯೇ ಸರಿಯಾಗಿ ಆಗದ ಕಾರಣ ಇನ್ನೂ ಸಾವಿರಾರು ಜನ ಎಂಡೋ ಬಾಧಿತರ ಪಟ್ಟಿಯಲ್ಲಿ ಸೇರಿಲ್ಲ.ಈ ಕಾರಣಕ್ಕಾಗಿ ಪಟ್ಟಿಯಲ್ಲಿ ಸೇರದ ಸಾವಿರಾರು ಎಂಡೋಸಲ್ಫಾನ್ ಬಾಧಿತರು ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಲತಿ ಸುರೇಶ ಕರ್ಕಿ, ಎಂಡೋಸಲ್ಫಾನ್ ಕಾರ್ಯಕ್ರಮಗಳ ಮೇಲ್ವಿಚಾರಕರು, ಸೊಡ್‌ವೆಸ್ ಸಂಸ್ಥೆ, ವರ್ಷಾ ಪ್ರಭಾಕರ ಹೆಗಡೆ, ಯೋಜನಾ ವಿಭಾಗದ ಮುಖ್ಯಸ್ಥರು, ಸ್ಕೊಡ್‌ವೆಸ್ ಸಂಸ್ಥೆ, ಪ್ರಜ್ಞಾಕುಮಾರ ಹೆಗ್ಗಡೆ, ಯೋಜನಾ ಸಂಯೋಜಕ, ಸ್ಕೊಡ್‌ವೆಸ್ ಸಂಸ್ಥೆ ಮೊದಲಾದವರು ಹಾಜರಿದ್ದರು.
……

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button