
ಮಂಗಳೂರು: ಶೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡಿದ್ದ ಯುವಕ ಆತ್ಮಹತ್ಯೆ
ಮಂಗಳೂರು: ಯುವಕನೋರ್ವ ಮನೆಯಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕರಂಗಲ್ಪಾಡಿಯಲ್ಲಿ ನಡೆದಿದೆ.
ಕರಂಗಲ್ಪಾಡಿ ನಿವಾಸಿ, ಸಿಎ ವ್ಯಾಸಂಗ ಮಾಡುತ್ತಿದ್ದ ಯುವಕ ಕಾರ್ಲ್ ಲಾರೆನ್ಸ್ ಅರಾನ್ (23) ಸಾವಿಗೆ ಶರಣಾದ ಯುವಕ.
ಸಿಎ ಮಾಡುವುದರೊಂದಿಗೆ ಲಾರೆನ್ಸ್ ಅರಾನ್ ತನ್ನ ತಂದೆಯೊಂದಿಗೆ ಸೇರಿಕೊಂಡು ಮ್ಯೂಚುವಲ್ ಫಂಡ್ ಸೇರಿದಂತೆ ಷೇರು ಮಾರ್ಕೆಟ್ ಬಿಸಿನೆಸ್ ನಲ್ಲಿ ತೊಡಗಿಸಿಕೊಂಡಿದ್ದರು.
ಸೋಮವಾರ ಷೇರ್ ಮಾರ್ಕೆಟ್ ರಜೆ ಇದ್ದುದರಿಂದ ಕಾರ್ಲ್ ಲಾರೆನ್ಸ್ ಅರಾನ್ ಮನೆಯಲ್ಲೇ ಉಳಿದಿದ್ದರು. ಮಧ್ಯಾಹ್ನ ಭೋಜನದ ಬಳಿಕ ಕೊಠಡಿ ಸೇರಿದ್ದ ಅವರು ಸಂಜೆ 4ಗಂಟೆಯ ಬಳಿಕ ಅವರನ್ನು ಕರೆದರೂ ಅವರು ಸ್ಪಂದಿಸಿರಲಿಲ್ಲ. ಫೋನ್ ಮಾಡಿದರೆ ಸ್ವಿಚ್ ಆಫ್ ಆಗಿತ್ತು. ರಾತ್ರಿ 7 ಗಂಟೆಯಾದರೂ ಕೊಠಡಿಯಿಂದ ಹೊರ ಬಂದಿರದ ಹಿನ್ನೆಲೆಯಲ್ಲಿ ಮನೆಯವರು ಕದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಆಗಮಿಸಿ ರಾತ್ರಿ ಬಾಗಿಲು ಒಡೆದು ನೋಡಿದಾಗ, ಲಾರೆನ್ಸ್ ಬೆಟ್ ಶೀಟನ್ನೇ ಕಿಟಕಿಗೆ ಕಟ್ಟಿ ಕತ್ತಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಆತ್ಮಹತ್ಯೆಗೆ ಕಾರಣವೇನು ಎಂದು ತಿಳಿದುಬಂದಿಲ್ಲ.




