
Vijayapura | 500 ಕೋಟಿ ವಿಶೇಷಾನುದಾನ ಮಂಜೂರಿಗೆ ಮನವಿ
ವಿಜಯಪುರ : ವಿಜಯಪುರ ಮಹಾನಗರಕ್ಕೆ ಮೂಲಭೂತ ಸೌಕರ್ಯಕ್ಕೆ 500 ಕೋಟಿ ರೂ. ವಿಶೇಷಾನುದಾನವನ್ನು ಮಂಜೂರು ಮಾಡುವಂತೆ ವಿಜಯಪುರ ಮಹಾನಗರ ಪಾಲಿಕೆ ವತಿಯಿಂದ ಲಿಖಿತ ಮನವಿ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಅವರಿಗೆ ಅರ್ಪಿಸಲಾಯಿತು.
ವಿಜಯಪುರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಮೆಹಜಬೀನ್ ಹೊರ್ತಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಮನವಿ ಪತ್ರದಲ್ಲಿರುವ ಅಂಶಗಳನ್ನು ಉಲ್ಲೇಖಿಸಿದ ಉಪಮೇಯರ್ ದಿನೇಶ ಹಳ್ಳಿ ಮಾತನಾಡಿ, ವಿಜಯಪುರ ಮಹಾನಗರ ಪಾಲಿಕೆಗೆ ಐದುನೂರು ಕೋಟಿ ರೂ. ಅನುದಾನ ಅವಶ್ಯಕತೆ ಇದೆ, ವಿಜಯಪುರ ನಗರ ಪ್ರಸ್ತುತ 4.45 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ನಗರ ವೇಗವಾಗಿ ಬೆಳೆಯುತ್ತಿದ್ದು, ಆದರೆ ಅನೇಕ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ, ಸುಸಜ್ಜಿತ ರಸ್ತೆ, ಚರಂಡಿ, ಮೇಲ್ಸೆತುವೆ, ಶೌಚಾಲಯ ಸಮಸ್ಯೆ ಹೀಗೆ ಮೂಲ ಸೌಕರ್ಯಗಳ ಕೊರತೆ ಎಲ್ಲೆಡೆ ಕಂಡು ಬರುತ್ತಿದೆ, ಹೀಗಾಗಿ ಈ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ದೃಷ್ಟಿಯಿಂದ 500 ಕೋಟಿ ರೂ. ವಿಶೇಷಾನುದಾನವನ್ನು ಮಂಜೂರು ಮಾಡುವಂತೆ ಮನವಿ ಮಾಡಿಕೊಂಡರು.
ಅದೇ ತೆರನಾಗಿ ವಿಜಯಪುರ ನಗರದ ಪ್ರಮುಖ ಜಲಮೂಲವಾಗಿರುವ ಭೂತನಾಳ ಕೆರೆ ಬತ್ತಿ ಹೋಗಿದ್ದು, ತಿಡಗುಂದಿ ಜಾಕವೆಲ್ ಮೂಲಕ ನೀರು ಹರಿಸುವ ಮೂಲಕ ಭೂತನಾಳ ಕೆರೆ ತುಂಬಿಸುವ ವಿಶೇಷ ಕಾಮಗಾರಿ ಕೈಗೊಂಡರೆ ನಗರದ ನೀರಿನ ಸಮಸ್ಯೆ ನಿವಾರಣೆಯಾಗಲಿದೆ, ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು ಎಂದು ವಿವರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ, ಕೇವಲ 500 ಕೋಟಿ ರೂ. ಅನುದಾನ ಕೇಳಿದರೆ ಅದು ಬಿಡುಗಡೆಯಾಗುವುದು ಕಷ್ಟ ಸಾಧ್ಯ, 500 ಕೋಟಿ ರೂ. ಅನುದಾನದಲ್ಲಿ ಯಾವ ರೀತಿ ಕಾಮಗಾರಿ ಕೈಗೊಳ್ಳಬೇಕು ಎಂಬಿತ್ಯಾದಿ ಸುದೀರ್ಘವಾದ ಕ್ರೀಯಾಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಿ ಎಂದರು.
ಈ ವಿಶೇಷ ಪ್ರಸ್ತಾವನೆಯ ಅನುದಾನ ಕೋರಿಕೆಯನ್ನು ಮುಖ್ಯಮಂತ್ರಿಗಳ ಹಾಗೂ ನಗರಾಭಿವೃದ್ಧಿ ಸಚಿವರ ಜೊತೆ ಚರ್ಚಿಸಿ ಅನುದಾನ ಬಿಡುಗಡೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವೆ, ಪಾಲಿಕೆ ಸದಸ್ಯರ ನಿಯೋಗವನ್ನು ಸಹ ಬೆಂಗಳೂರಿಗೆ ಕರೆದುಕೊಂಡು ಹೋಗಿ ಈ ಅನುದಾನ ಬಿಡುಗಡೆಯ ನಿಟ್ಟಿನಲ್ಲಿ ಮುಖ್ಯಮಂತ್ರಿ, ಸಚಿವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಮೇಯರ್ ಮೆಹಜಬೀನ್ ಹೊರ್ತಿ ಮಾತನಾಡಿ, ಜಿಲ್ಲೆಯ ಸಚಿವರು, ಶಾಸಕರು ಹಾಗೂ ಸರ್ವ ಸದಸ್ಯರ ಅಭಿಪ್ರಾಯ, ಸಲಹೆ ಪಡೆದು ಕಾರ್ಯನಿರ್ವಹಿಸಿ ನಗರದ ಸರ್ವತೋಮುಖ ಪ್ರಗತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದರು.
ಸಭೆ ಆರಂಭವಾಗುತ್ತಿದ್ದಂತೆ ಪಾಲಿಕೆ ಸದಸ್ಯ ರಾಜಶೇಖರ ಮಗಿಮಠ, ಸಭೆಯಲ್ಲಿ ಅನೇಕ ಅಧಿಕಾರಿಗಳು ಗೈರಾಗಿದ್ದಾರೆ, ಇದೊಂದು ಗಂಭೀರವಾದ ಸಭೆ ಅಧಿಕಾರಿಗಳು ಹಾಜರಾಗದೇ ಇದ್ದರೆ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಸದಸ್ಯ ರಾಹುಲ್ ಜಾಧವ ದನಿಗೂಡಿಸಿದರು. ಅಧಿಕಾರಿಗಳು ಕಡ್ಡಾಯವಾಗಿ ಸಭೆಯಲ್ಲಿ ಹಾಜರಾಗಬೇಕು ಎಂಬ ಒತ್ತಾಯ ಎಲ್ಲ ಸದಸ್ಯರಿಂದಲೂ ಕೇಳಿ ಬಂದಿತು.
ಉಪಮೇಯರ್ ದಿನೇಶ ಹಳ್ಳಿ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ, ಪಾಲಿಕೆ ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.
ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ:
ನಡೆದಾಡುವ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಪಾಲಿಕೆ ಸದಸ್ಯ ವಿಜಯಕುಮಾರ ಬಿರಾದರ, ಪಾಲಿಕೆ ಮಾಜಿ ಸದಸ್ಯರಾದ ವಿಜಯಕುಮಾರ ಮಂಗಳವೇಡೆ, ನಗರಸಭೆ ಮಾಜಿ ಅಧ್ಯಕ್ಷರಾದ ಅಬ್ದುಲ್ ರಜಾಕ್ ಲೋಣಿ, ಮಾಜಿ ಅಧ್ಯಕ್ಷ ಕಮಾಲ್ ಸಾಬ ಇನಾಮದಾರ, ಮಾಜಿ ಉಪಮೇಯರ್ ಆನಂದ ಧುಮಾಳೆ, ಗಣ್ಯ ಉದ್ಯಮಿ ಡಿ.ಎಸ್ ಗುಡ್ಡೋಡಗಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.




