Election

ಬಿಎಸ್‌ಎಸ್‌ಕೆ ಚುನಾವಣೆ ದಾರಿ ಸುಗಮ

ಬೀದರ್: ಬೀದರ್ ಸಹಕಾರಿ ಸಕ್ಕರೆ ಕಾರಖಾನೆಯ ಆಡಳಿತ ಮಂಡಳಿ ಚುನಾವಣೆಯನ್ನು ಮುಂದೂಡಿ ಹೊರಡಿಸಲಾಗಿದ್ದ ಆದೇಶವನ್ನು ರಾಜ್ಯ ಸರಕಾರ ವಾಪಸ್ ಪಡೆದ ಮಹತ್ವದ ಬೆಳವಣಿಗೆ ನಡೆದಿದೆ. ಇದರೊಂದಿಗೆ ಆಡಳಿತ ಮಂಡಳಿ ಚುನಾವಣೆಗೆ ಎದುರಾಗಿದ್ದ ಎಲ್ಲ ಅಡ್ಡಿಗಳು ನಿವಾರಣೆಯಾದಂತಾಗಿವೆ.
ಬೀದರ್ ಸಹಕಾರಿ ಸಕ್ಕರೆ ಕಾರಖಾನೆ (ಬಿಎಸ್‌ಎಸ್‌ಕೆ) ಯು ಸದ್ಯ ಚುನಾವಣಾ ಕಾರಣದಿಂದಾಗಿಯೇ ಚರ್ಚೆಯಲ್ಲಿದೆ. ಸಹಕಾರಿ ಕ್ಷೇತ್ರದ ಈ ಕಾರಖಾನೆಯ ವಿಷಯದಲ್ಲಿ ರಾಜ್ಯ ಸರಕಾರ ಅಸಹಕಾರ ತೋರುತ್ತಿದೆಯೇನೋ ಎಂಬ ಭಾವನೆ ರೈತರಲ್ಲಿ ಬಲಗೊಳ್ಳಲಾರಂಭಿಸಿದೆ.
ಬೀದರ್ ಸಹಕಾರಿ ಸಕ್ಕರೆ ಕಾರಖಾನೆ, ಮಹಾತ್ಮಾಗಾಂಧಿ ಸಹಕಾರಿ ಸಕ್ಕರೆ ಕಾರಖಾನೆ ಮತ್ತು ನಾರಂಜಾ ಸಹಕಾರಿ ಸಕ್ಕರೆ ಕಾರಖಾನೆಯ ಚುನಾವಣೆಯು ಒಂದೇ ತಿಂಗಳಿನಲ್ಲಿ ನಡೆಯಬೇಕಿತ್ತು. ಆದರೆ, ಮತದಾರರ ಪಟ್ಟಿ ಕುರಿತು ಕೆಲವರು ತಕರಾರು ಎತ್ತಿ ಕೋರ್ಟ್ ಮೊರೆ ಹೋಗಿದ್ದರಿಂದ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದರೆ, ಮತದಾರರ ಪಟ್ಟಿಯನ್ನು ಸಹಕಾರ ಕಾಯ್ದೆಯ ಅನುಸಾರವೇ ಸಿದ್ಧಪಡಿಸಿದ್ದರಿಂದ ತಡೆಯಾಜ್ಞೆ ತೆರವುಗೊಂಡು, ಚುನಾವಣೆ ನಡೆಸಲು ನಿರ್ಧರಿಸಲಾಯಿತು. ಚುನಾವಣೆ ವೇಳಾಪಟ್ಟಿಯನ್ನೂ ಪ್ರಕಟಿಸಲಾಯಿತು.
ಆದರೆ, ಕಾರಖಾನೆಯು ನಷ್ಟದಲ್ಲಿದೆ ಎಂಬ ನೆಪ ಮುಂದಿಟ್ಟು ರಾಜ್ಯ ಸರಕಾರ ಚುನಾವಣೆಯನ್ನು ಮುಂದೂಡಿತ್ತು. ರಾಜ್ಯಸರಕಾರದ ಈ ಆದೇಶದ ವಿರುದ್ಧ ಕಾರಖಾನೆಯ ಹಿಂದಿನ ಅಧ್ಯಕ್ಷ ಸಂಜಯ ಖೇಣಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಸರಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಇದಾದ ನಂತರ ರಾಜ್ಯಸರಕಾರ ಸ್ವತ: ತನ್ನ ಆದೇಶವನ್ನು ಹಿಂದಕ್ಕೆ ಪಡೆದಿದೆ. `ಬೀದರ್ ಸಹಕಾರಿ ಸಕ್ಕರೆ ಕಾರಖಾನೆಯ ಆಡಳಿತ ಮಂಡಳಿ ಚುನಾವಣೆಯನ್ನು ಮುಂದೂಡಿ ಫೆಬ್ರವರಿ 23 ರಂದು ಹೊರಡಿಸಲಾಗಿದ್ದ ಆದೇಶವನ್ನು ಈ ಕೂಡಲೇ ಜಾರಿಗೆಬರುವಂತೆ ಹಿಂಪಡೆಯಲಾಗಿದೆ’ ಎಂದು ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ಸಿ. ರಾಧಾ ಅವರು ತಿಳಿಸಿದ್ದಾರೆ. ಮಾರ್ಚ್12 ರಂದೇ ರಾಜ್ಯ ಸರಕಾರ ಈ ನಿರ್ಧಾರ ಕೈಗೊಂಡಿದೆ.
ಈ ಮಧ್ಯೆ ಕಾರಖಾನೆಯ ಮಾಜಿ ಅಧ್ಯಕ್ಷ ಸಂಜಯ ಖೇಣಿ ಅವರ ಬಿಜೆಪಿ ಸೇರ್ಪಡೆಯನ್ನು ವಿರೋಧಿಸಿರುವ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಕಾರಖಾನೆಯ ನಷ್ಟಕ್ಕೆ ಸಂಜಯ ಖೇಣಿ ಅವರೇ ಕಾರಣರು ಎಂದು ಆರೋಪಿಸಿದ್ದಾರೆ. ಈಚೆಗೆ ಮನ್ನಾಎಕ್ಕೆಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಶೈಲೇಂದ್ರ ಬೆಲ್ದಾಳೆ ಅವರು ಸಂಜಯ ಖೇಣಿ ವಿರುದ್ಧ ಹಲವು ಆರೋಪ ಮಾಡುತ್ತಿದ್ದಾರೆ.
ಶೈಲೇಂದ್ರ ಬೆಲ್ದಾಳೆ ಅವರು ಇಲ್ಲಿಯವರೆಗೆ ಒಮ್ಮೆಯೂ ಬಿಎಸ್‌ಎಸ್‌ಕೆ ಬಗ್ಗೆ ಮಾತನಾಡಿರಲಿಲ್ಲ. ಇಷ್ಟು ದಿನ ಮೌನವಾಗಿದ್ದವರು ಈಗ ದಿಢೀರನೇ ಮಾತನಾಡಲಾರಂಭಿಸಿದ್ದಾರೆ. ಸಂಜಯ ಖೇಣಿ ಬಿಜೆಪಿ ಸೇರಿದ್ದರಿಂದಲೇ ಬೆಲ್ದಾಳೆಯುವರು ಕಾರಖಾನೆ ವಿಷಯ ಮುಂದಿಟ್ಟುಕೊAಡು ಆರೋಪ ಮಾಡುತ್ತಿರಬಹುದು ಎಂಬ ಚರ್ಚೆ ನಡೆಯುತ್ತಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button