
ಬಸವಕಲ್ಯಾಣ ಉಪಚುನಾವಣೆಗೆ ಮುಹೂರ್ತ ನಿಗದಿ
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ದೇಶದ ವಿವಿಧ ರಾಜ್ಯಗಳ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ಇದರಲ್ಲಿ ರಾಜ್ಯದ ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳೂ ಸೇರಿವೆ.
ಮಾರ್ಚ್ 23 ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು, ಮಾ. 30 ರವರೆಗೆ ನಾಮಪತ್ರ ಸಲ್ಲಿಸಬಹುದು. 31 ರಂದು ನಾಮಪತ್ರಗಳ ಪರಿಶೀಲನೆ ನಡೆಯುವುದು. ನಾಮಪತ್ರ ವಾಪಸ್ ಪಡೆಯಲು ಏ. 3 ಕೊನೆಯ ದಿನವಾಗಿದೆ. ಏ. 17 ರಂದು ಮತದಾನ ಹಾಗೂ ಮೇ 2 ರಂದು ಮತ ಎಣಿಕೆ ನಡೆಯಲಿದೆ.
ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ಅವರ ನಿಧನದಿಂದಾಗಿ ಬಸವಕಲ್ಯಾಣ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಶಾಸಕ ಪ್ರತಾಪಗೌಡ ಪಾಟೀಲ್ ಅವರ ರಾಜೀನಾಮೆಯಿಂದಾಗಿ ಮಸ್ಕಿ ಕ್ಷೇತ್ರ ತೆರವಾಗಿದೆ. ಸಂಸದ ಸುರೇಶ ಅಗಡಿ ಅವರ ನಿಧನದಿಂದಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಘೋಷಣೆಯಾಗಿದೆ. ಆದರೆ, ಶಾಸಕ ಮನಗೂಳಿ ನಿಧನರಿಂದ ತೆರವಾಗಿರುವ ಸಿಂಧಗಿ ಕ್ಷೇತ್ರಕ್ಕೆ ಮಾತ್ರ ಉಪಚುನಾವಣೆ ಘೋಷಣೆಯಾಗಿಲ್ಲ.
ಉಪಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಲೆ ರಾಜಕೀಯ ಚಟುವಟಿಕೆ ಬಿರುಸುಗೊಂಡಿವೆ. ಪ್ರಮುಖ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಹೈಕಮಾಂಡ್ ಮನವೊಲಿಕೆಗೆ ರಾಜಧಾನಿಗೆ ಧಾವಿಸಿದ್ದಾರೆ.
ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ರಾಜ್ಯ ಬಿಜೆಪಿ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ ಕಟೀಲ್ ಅವರು ಈಗಾಗಲೇ ಬಸವಕಲ್ಯಾಣಕ್ಕೆ ಭೇಟಿ ನೀಡಿ, ಕಾರ್ಯಕರ್ತರಲ್ಲಿ ಶಕ್ತಿ ತುಂಬಿದ್ದಾರೆ.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಬಸವಕಲ್ಯಾಣ ಚುನಾವಣೆಯ ಉಸ್ತುವಾರಿಯಾಗಿ ನೇಮಕ ಮಾಡಲಾಗಿದ್ದು, ಸವದಿ ಅವರು ಈಗಾಗಲೇ ಎರಡು ಬಾರಿ ಬಸವಕಲ್ಯಾಣಕ್ಕೆ ಭೇಟಿ ನೀಡಿ, ಟಿಕೆಟ್ ಆಕಾಂಕ್ಷಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ, ಮುಖಂಡರ ಸಭೆಗಳೂ ನಡೆದಿವೆ.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರೂ ಬಸವಕಲ್ಯಾಣಕ್ಕೆ ಭೇಟಿ ನೀಡಿದ್ದಾರೆ. ಮಠಗಳಿಗೆ ಭೇಟಿ ನೀಡಿ, ಬೆಂಬಲ ಕೋರಿದ್ದಾರೆ. ಮರಾಠಾ ಸಮಾಜದ ಹಿರಿಯ ಸಭೆ ನಡೆಸಿದ್ದಾರೆ. ಇತರೆ ಸಮುದಾಯಗಳ ಮುಖಂಡರನ್ನೂ ಭೇಟಿಯಾಗಿದ್ದಾರೆ.
ಹೀಗೆ ಚುನಾವಣೆ ಘೋಷಣೆಗೆ ಮೊದಲೇ ಬಿಜೆಪಿಯು ವೇದಿಕೆಯನ್ನು ಸಜ್ಜುಗೊಳಿಸಿದೆ. ಅಭ್ಯರ್ಥಿ ಘೋಷಣೆ ಮಾತ್ರ ಬಾಕಿ ಇದೆ.
ಸದ್ಯ ನಡೆಯುತ್ತಿರುವ ಚರ್ಚೆಯ ಪ್ರಕಾರ ಶರಣು ಸಲಗರ್, ಗುಂಡುರೆಡ್ಡಿ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರ ಹೆಸರುಗಳು ಚರ್ಚೆಯಲ್ಲಿವೆ. ಸಂಘ ಪರಿವಾರದ ಕೈ ಮೇಲಾದರೆ, ಸಂಜಯ ಪಟವಾರಿ ಅಭ್ಯರ್ಥಿ ಆಗಬಹುದು. ಪಟವಾರಿ ಹಿಂದೊಮ್ಮೆ ಸ್ಪರ್ಧಿಸಿ, ಪರಾಭವಗೊಂಡಿದ್ದಾರೆ.
ಮಲ್ಲಿಕಾರ್ಜುನ ಖೂಬಾ ಹಿಂದೆ ಜೆಡಿಎಸ್ ಶಾಸಕರಾಗಿದ್ದರು. ಕಳೆದ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಒಂದೊಮ್ಮೆ ಬಿಜೆಪಿ ಟಿಕೆಟ್ ಸಿಗದಿದ್ದಲ್ಲಿ ಅವರು ಬೇರೆ ಪಕ್ಷದತ್ತ ಮುಖ ಮಾಡಬಹುದು.
ಮರಾಠಾ ಸಮಜದ ಮುಖಂಡ ಎಂ.ಜಿ. ಮುಳೆ ಅವರೂ ಕಣಕ್ಕಿಳಿಯುವ ಸಾಧ್ಯತೆ ಇದೆ. ಕೆಲ ದಿನಗಳ ಹಿಂದೆ ಅವರು ಎನ್ಸಿಪಿ ನಾಯಕರನ್ನು ಭೇಟಿಯಾಗಿದ್ದರು ಎಂಬ ಸುದ್ದಿ ವರದಿಯಾಗಿತ್ತು. ಅಭ್ಯರ್ಥಿ ಆಯ್ಕೆ ಶುರುವಾಗುತ್ತಲೇ ಸ್ಪರ್ಧೆಯ, ಸ್ಪರ್ಧಾಳುಗಳ ಚಿತ್ರ ಸ್ಪಷ್ಟವಾಗಲಿದೆ.
ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷವು ಮಾಜಿ ಶಾಸಕ ಬಿ. ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಅವರಿಗೆ ಟಿಕೆಟ್ ನೀಡಬಹುದು. ಶಾಸಕರು ನಿಧನರಾದಾಗ ಅವರ ಪರಿವಾರದ ಸದಸ್ಯರಿಗೇ ಟಿಕೆಟ್ ನೀಡುವ ಪದ್ಧತಿ ಕಾಂಗ್ರೆಸ್ನಲ್ಲಿದೆ. ಅದು ಬಸವಕಲ್ಯಾಣದಲ್ಲೂ ಮುಂದುವರೆಯಬಹುದು. ಅಥವ ಬದಲಾವಣೆ ಆದರೂ ಆಗಬಹುದು.
ಜೆಡಿಎಸ್ ಚಿತ್ರ ಸ್ಪಷ್ಟವಾಗಿಲ್ಲ. ಉಪಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದರು. ನಂತರ ಕುಮಾರಸ್ವಾಮಿಯವರು ಸ್ಪರ್ಧೆಯ ಮಾತಾಡಿದ್ದರು. ಟಿಕೆಟ್ ವಂಚಿತ ಅನ್ಯ ಪಕ್ಷಗಳ ನಾಯಕರನ್ನು ಜೆಡಿಎಸ್ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ.




