
ನಾರಾಯಣ ಗುರು ಟ್ಯಾಬ್ಲೋ ತಿರಸ್ಕರಿಸಿದ ಬಿಜೆಪಿ ಇಂದು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಹೊರಟಿದೆ: ಸತ್ಯಜಿತ್ ಸುರತ್ಕಲ್ ಆಕ್ರೋಶ
ಮಂಗಳೂರು: ಅಂದು ಮೋದಿ ಸರಕಾರ ಗಣರಾಜ್ಯೋತ್ಸವ ಪೆರೇಡ್ ವೇಳೆ ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೊವನ್ನು ನಿರಾಕರಿಸಿತ್ತು. ಬಳಿಕ ಕರ್ನಾಟಕದಲ್ಲಿ ಹತ್ತನೇ ತರಗತಿ ಪಠ್ಯಪುಸ್ತಕದಿಂದ ನಾರಾಯಣ ಗುರುಗಳ ಪಠ್ಯವನ್ನು ಕೈಬಿಡಲಾಯಿತು. ಈ ವೇಳೆ ಬಿಲ್ಲವ ಸಮುದಾಯ ಬೀದಿಗಿಳಿದು ಹೋರಾಟ ನಡೆಸಿದ್ದರೂ ಬಿಜೆಪಿಯ ಯಾರೂ ಕೈಜೋಡಿಸಿರಲಿಲ್ಲ. ಆದರೆ ಇದೀಗ ಬಿಲ್ಲವರ ಮತಕ್ಕಾಗಿ ಲೇಡಿಹಿಲ್ ನಲ್ಲಿರುವ ನಾರಾಯಣ ಗುರುಗಳ ಪ್ರತಿಮೆಗೆ ರೋಡ್ ಶೋ ವೇಳೆ ನರೇಂದ್ರ ಮೋದಿಯವರಿಂದ ಬಿಜೆಪಿ ಮಾಲಾರ್ಪಣೆ ಮಾಡಿಸಲು ಮುಂದಾಗಿದೆ. ಈ ಮೂಲಕ ಬಿಲ್ಲವರ ಮುಂಗೈಗೆ ಬೆಲ್ಲ ಹಚ್ಚುವ ಕಾರ್ಯ ಬಿಜೆಪಿ ಮಾಡುತ್ತಿದೆ. ಇದನ್ನು ನಾವು ವಿರೋಧಿಸುತ್ತೇವೆ ಎಂದು ಶ್ರೀ ನಾರಾಯಣಗುರು ವಿಚಾರ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,
ಈವರೆಗೆ ಬಿಜೆಪಿ ಬ್ಯಾನರ್ ಗಳಲ್ಲಿ ನಾರಾಯಣ ಗುರುಗಳ ಫೋಟೋಗಳನ್ನು ಬಳಕೆ ಮಾಡಲಾಗುತ್ತಿತ್ತು. ಇದೀಗ ಬಿಲ್ಲವರ ಆರಾಧ್ಯ ದೈವಗಳಾದ ಕೋಟಿ – ಚೆನ್ನಯರ ಫೋಟೊಗಳನ್ನು ದುರ್ಬಳಕೆ ಮಾಡುತ್ತಿದೆ. ಕೋಟಿ – ಚೆನ್ನಯರನ್ನು, ಬಿಲ್ಲವರನ್ನು ಅವಹೇಳನ ಮಾಡಿ ನಿಂದಿಸಿರುವ ಬಿಜೆಪಿ ನಾಯಕನನ್ನು ಬಿಜೆಪಿ ಪಕ್ಷ ಈವರೆಗೆ ಉಚ್ಚಾಟಿಸಿಲ್ಲ. ಇದೀಗ ಇವರು ರಾಜಕೀಯ ಲಾಭಕ್ಕಾಗಿ ಕೋಟಿ – ಚೆನ್ನಯರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಚುನಾವಣೆಯಲ್ಲಿ ಬಿಲ್ಲವರು ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಬಿಲ್ಲವರ ಮತಕ್ಕಾಗಿ ಬಿಜೆಪಿ ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಗೂ ಕೋಟಿ – ಚೆನ್ನಯರನ್ನು ರಾಜಕೀಯವಾಗಿ ಬಳಕೆ ಮಾಡಿ ಸಮಾಜಕ್ಕೆ ಮಂಕುಬೂದಿ ಎರಚುವ ಕೆಲಸ ಮಾಡುತ್ತಿದೆ. ಸಮಾಜದ ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಇದನ್ನು ಸಹಿಸಲಾಗುತ್ತಿಲ್ಲ ಎಂದು ಅವರು ಹೇಳಿದರು.




