Uttara Kannada

ತಾಯಿ ಹೊಟ್ಟೆಯಿಂದಲೇ ಹಿಂದುತ್ವ ಕಲಿತಿದ್ದೇವೆ, ಬಿಜೆಪಿಗರ ಹಿಂದುತ್ವ ಬೇಕಿಲ್ಲ: ಡಾ.ಅಂಜಲಿ ನಿಂಬಾಳ್ಕರ್

ಕಾರವಾರ : ಹಿಂದುತ್ವದ ರಕ್ಷಣೆ ಮಾಡುತ್ತೇವೆನ್ನುವ ಬಿಜೆಪಿಗರೇ, ನಾವು ತಾಯಿ ಹೊಟ್ಟೆಯಿಂದಲೇ ಹಿಂದುತ್ವ ಕಲಿತು ಬಂದಿದ್ದೇವೆ. ನಿಮ್ಮ ಹಿಂದುತ್ವದ ಪಾಠ ನಮಗೆ ಬೇಕಿಲ್ಲ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ವಾಗ್ದಾಳಿ ನಡೆಸಿದರು.

ಬಳ್ಕೂರು ಜಿಲ್ಲಾ ಪಂಚಾಯತಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಗರದ್ದು ಕೇವಲ ಕೋಮುವಾದಿ ಶಿಕ್ಷಣ, ಬೆಂಕಿ ಹಚ್ಚುವ ಕೆಲಸ. ಛತ್ರಪತಿ ಶಿವಾಜಿ, ಸಾವಿತ್ರಿಬಾಯಿ ಫುಲೆರಂಥವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವವರು ಕಾಂಗ್ರೆಸ್ಸಿಗರು‌. ಬಿಜೆಪಿಗರು ಕಾಂಗ್ರೆಸ್‌ಗೆ ಬಂದರೂ ಸ್ವಾಗತ, ಬರದಿದ್ದರೂ ಸ್ವಾಗತವಿದೆ. ಕಾಂಗ್ರೆಸ್ ಕುಟುಂಬ ಜಿಲ್ಲೆಯಲ್ಲಿ ಗಟ್ಟಿಯಾಗಿ ನಿಂತಿದೆ. ಬಿಜೆಪಿಗರು ಮೇಲೆ ನೋಡಿ ಮತ ಹಾಕಿ ಎನ್ನುತ್ತಾರೆ. ೧೦ ವರ್ಷದಿಂದ ನೋಡುತ್ತಿದ್ದೇವೆ, ಮೇಲೆ ಏನೂ ಕಾಣಿಸುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ೧೦ ವರ್ಷದಲ್ಲಿ ಮಾಡದ ಕೆಲಸಗಳನ್ನ ಬಿಜೆಪಿಗರು ಈಗ ಮಾಡುತ್ತಾರಾ? ಏನೂ ಮಾಡಲು ಬಾರದ ಪಕ್ಷ ದೇಶದಲ್ಲಿದ್ದರೆ ಅದು ಬಿಜೆಪಿ ಮಾತ್ರ ಎಂದರು‌.

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆದ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ, ಸಂವಿಧಾನದ ಅಡಿಯಲ್ಲಿ ಸರ್ಕಾರ ನಡೆಯುತ್ತಿದೆ. ಆದರೆ ಸಂವಿಧಾನವನ್ನ ಬಿಜೆಪಿಗರು ಬದಲಿಸುತ್ತೇವೆನ್ನುತ್ತಾರೆ. ಬಿಜೆಪಿ ಹೇಳೋದೊಂದು, ಮಾಡೋದೊಂದು ಎಂದರು.

ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಬಿಜೆಪಿಯವರು ಇಂದು ಬಿಡುಗಡೆ ಮಾಡಿರುವುದು ಪ್ರಣಾಳಿಕೆಯಲ್ಲ, ಸುಳ್ಳಿನ ಪತ್ರ. ಉತ್ತರಪ್ರದೇಶದಲ್ಲಿ ಪ್ರತಿ ಆರು ನಿಮಿಷಕ್ಕೊಂದು ಅತ್ಯಾಚಾರ ಆಗುತ್ತಿದೆ. ಭೇಟಿ ಬಚಾವೋ ಭೇಟಿ ಪಡಾವೋ ಎನ್ನುವ ಮೋದಿಯವರಿಗೆ ನಮ್ಮ ಹೆಣ್ಣುಮಕ್ಕಳ ರಕ್ಷಣೆ ಮಾಡಲಾಗುತ್ತಿಲ್ಲ. ಭವಿಷ್ಯ ಉಜ್ವಲಗೊಳಿಸುತ್ತೇವೆಂದು ಚಂದ್ರ ತೋರಿಸುವ ಕೆಲಸ ಬಿಜೆಪಿಯಿಂದಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಶಿರಸಿ ಶಾಸಕ ಭೀಮಣ್ಣ ನಾಯ್ಕ, ಡಾ.ಅಂಜಲಿ ಗೆಲುವು ನಮ್ಮೆಲ್ಲರ ಗೆಲುವು ಎಂದರು‌.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಪುಷ್ಪಾ ನಾಯ್ಕ, ವೆಂಕಟೇಶ ಹೆಗಡೆ ಹೊಸಬಾಳೆ, ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಮುಂತಾದವರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button