Crime

ಸೋಮಸಮುದ್ರ ಗ್ರಾಮದಲ್ಲಿ ನೈರ್ಮಲ್ಯ ಸಾಕ್ಷರತಾ ಅಭಿಯಾನ ಕಾರ್ಯಕ್ರಮ; ‘ಕೋವಿಡ್ ಹಿನ್ನೆಲೆ ಉತ್ತಮ ನೈರ್ಮಲ್ಯ ಕಾಪಾಡಿಕೊಳ್ಳುವುದು ಅಗತ್ಯ’

ಬಳ್ಳಾರಿ, ಅ.03:- ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್), ರಾಷ್ಟ್ರದ ಉನ್ನತ ಅಭಿವೃದ್ಧಿ ಹಣಕಾಸು ಸಂಸ್ಥೆ (ಡಿಎಫ್‍ಐ), ಸೋಮಸಮುದ್ರ ಗ್ರಾಪಂ ಹಾಗೂ ಆಶಾ ಕಿರಣ ಸಮಾಜ ಸೇವಾದ ಸಂಯುಕ್ತ ಆಶ್ರಯದಲ್ಲಿ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ಉತ್ತಮ ಆರೋಗ್ಯಕರ ಮತ್ತು ನೈರ್ಮಲ್ಯ ಪದ್ಧತಿಗಳ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನೈರ್ಮಲ್ಯ ಸಾಕ್ಷರತಾ ಅಭಿಯಾನ ಶುಕ್ರವಾರ ನಡೆಯಿತು.
ಈ ನೈರ್ಮಲ್ಯ ಸಾಕ್ಷರತಾ ಅಭಿಯಾನವನ್ನು ಉದ್ದೇಶಿಸಿ ನಬಾರ್ಡ್ ಜಿಲ್ಲಾ ವ್ಯವಸ್ಥಾಪಕರಾದ ಅಪರ್ಣಾ ಕೋಲ್ತೆ ಮಾತನಾಡಿ, ಗ್ರಾಮೀಣ ಜನರಲ್ಲಿ ನೈರ್ಮಲ್ಯ ಸೌಲಭ್ಯಗಳನ್ನು ಬಳಸಲು ಪ್ರಚೋದಿಸುವುದು ಮತ್ತು ಅವುಗಳಿಂದ ಆರೋಗ್ಯ ಮತ್ತು ಜೀವನೋಪಾಯದ ಸ್ಥಿತಿ ಮೇಲೆ ಉಂಟಾಗುವ ಲಾಭಗಳನ್ನು ತಿಳಿಸುವ ಉದ್ದೇಶದಿಂದ ಈ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಪ್ರಸ್ತುತ ಕೋವಿಡ್-19 ಜಾಗತಿಕ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅತಿ ಅಗತ್ಯವಾಗಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಅಭಿವೃದ್ಧಿ ಹಣಕಾಸು ಸಂಸ್ಥೆಗಳಾದ ನಬಾರ್ಡ್ ಇವುಗಳೆಲ್ಲದರ ಪರಿಶ್ರಮದ ಪರಿಣಾಮವಾಗಿ ಭಾರತವನ್ನು ಬಯಲು ಶೌಚ ಮುಕ್ತ ದೇಶ ಎಂದು ಘೋಷಿಸಲಾಗಿದೆ ಮತ್ತು ದೇಶವು ಈಗ ಮುಂದಿನ ಹಂತ ಅಂದರೆ ‘ಒಡಿಎಫ್+’ ಕಡೆಗೆ ಸಾಗಿದೆ ಎಂದರು. ಈ ಅಭಿಯಾನವು ಜಿಲ್ಲೆಯಲ್ಲಿ ಬರುವ ಜನೆವರಿ 26ರವರೆಗೆ ನಡೆಯಲಿದೆ ಎಂದರು.
ಜಿಲ್ಲಾ ಲೀಡ್ ಬ್ಯಾಂಕ್ ನೋಡಲ್ ಅಧಿಕಾರಿ ನವೀನಕುಮಾರ್ ಅವರು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ ನೀರು ರಸ್ತೆಯಲ್ಲಿ ಬಿಡುವುದು, ಕಸವನ್ನು ರಸ್ತೆಯಲ್ಲಿ ಎಸೆಯುವುದು, ಮಲ ಮೂತ್ರ ವಿಸರ್ಜನೆಯನ್ನು ಬಯಲು ಪ್ರದೇಶಗಳಲ್ಲಿ ಹೋಗುವುದರಿಂದ ರೋಗಗಳು ಬರುತ್ತದೆ ಎಂದರು. ಎಲ್ಲರು ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಅವರು ಈ ಸಂದರ್ಭದಲ್ಲಿ ಸಲಹೆ ನೀಡಿದರು.
ಸೋಮಸಮುದ್ರ ಗ್ರಾಪಂ ಪಿಡಿಒ ಮಹ್ಮದ್‍ಗೌಸ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಆಶಾಕಿರಣ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಜಿ.ಭಾರತಿ, ಸೂರ್ಯ ದೇವ ರೈತರ ಉತ್ಪಾದಕರ ಕಂಪನಿಯ ನಿರ್ದೇಶಕರು, ಗ್ರಾಮಸ್ಥರು, ರೈತರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button