Crime

ರಾಯಚೂರು: ಭತ್ತದ ಬೆಳೆಗೆ ಕಣೆ ನೊಣ ಬಾಧೆ: ಕೃಷಿ ವಿವಿಯ ವಿಜ್ಞಾನಿಗಳ ತಂಡದಿಂದ ಸಮೀಕ್ಷೆ

ರಾಯಚೂರು,ಅ.05- ಮುಂಗಾರು ಹಂಗಾಮಿನಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಗಳಾದ ಗಂಗಾವತಿ, ಮಾನ್ವಿ, ಸಿಂಧನೂರು, ಇಸರಗುಪ್ಪ ಹಾಗೂ ಕಂಪ್ಲಿ ತಾಲೂಕುಗಳಲ್ಲಿ ರೈತರು ಬೆಳದಿರುವ ಭತ್ತದ ಬೆಳಗೆ ಕಣೆ ನೊಣ ಬಾಧೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಬಾಧಿತ ತಾಕುಗಳ ಸಮೀಕ್ಷೆ ನಡೆಸಿದೆ.
ಹಿರಿಯ ಕೀಟ ತಜ್ಞರಾದ ಡಾ.ಎಂ. ಭೀಮಣ್ಣ ಇವರ ನೇತೃತ್ವದಲ್ಲಿ ಕೀಟದ ಬಗ್ಗೆ ಸಮೀಕ್ಷೆ ನಡೆಸಲು ವಿಜ್ಞಾನಿಗಳ ತಂಡ ರಚಿಸಲಾಗಿತ್ತು. ವಿಜ್ಞಾನಿಗಳ ತಂಡವು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದ ಭತ್ತದ ತಾಕುಗಳಿಗೆ ಭೇಟಿ ನೀಡಿ ಕೀಟದ ಸಮೀಕ್ಷೆಯನ್ನು ನಡೆಸಿದರು. ಸಮೀಕ್ಷೆಯ ಪ್ರಕಾರ ಪ್ರತಿ ಭತ್ತದ ತೊಂಡೆಗೆ ಶೇ. 10 ರಿಂದ 30 ರಷ್ಟು ಹಾನಿಯಾಗಿದೆ. ಪ್ರಮುಖವಾಗಿ ಕೀಟದಿಂದ ತಗುಲಿದ ಹಾನಿಯು ಆರ್‍ಎನ್‍ಆರ್ – 150-48 ಮತ್ತು ಗಂಡು ಸೋನಾ ತಳಿಗಳ ತಾಕುಗಳಲ್ಲಿ ಹೆಚ್ಚಾಗಿ ಕಂಡು ಬಂದಿರುತ್ತದೆ. ಹಾನಿಯ ಪ್ರಮಾಣ ಹೆಚ್ಚಾಗಿ 30 ರಿಂದ 55 ದಿನಗಳ ಅವಧಿಯಲ್ಲಿ ಭತ್ತದ ತಾಕಿಗೆ ಕಾಣಿಸಿಕೊಂಡಿದೆ.
ಸೊಳ್ಳೆಯಂತೆ ಕಾಣುವ ಪ್ರೌಢ ಹೆಣ್ಣು ಕೀಟವು ತನ್ನ ಜೀವಿತಾವಧಿಯಲ್ಲಿ 100-200 ಮೊಟ್ಟೆಗಳನ್ನು ಒಂದೊಂದಾಗಿ ಎಲೆಯ ಮೇಲೆ ಇಡುತ್ತದೆ. ಮೂರರಿಂದ ನಾಲ್ಕು ದಿನಗಳ ನಂತರ ಹೊರ ಬರುವ ಮರಿಹುಳು ಸುಳಿಯ ಒಳಗೆ ಸೇರಿಕೊಂಡು ಬೆಳೆಯುವ ಕುಡಿಯನ್ನು ಕೆರೆದು ತಿನ್ನುತ್ತದೆ. ಎಳೆಯಿಂದ ಹೊರ ಬರುವ ಎಲೆಗಳು ಕೊಳವೆಯಂತೆ ಮಾರ್ಪಾಡುಗೊಂಡು ಗಿಡಗಳ ಬೆಳವಣಿಗೆ ನಿಂತು ಹೋಗುತ್ತದೆ ಹಾಗೂ 30 ರಿಂದ 60 ದಿನಗಳ ಅವಧಿಯ ಬೆಳೆಗೆ ಹೆಚ್ಚಾಗಿ ಹಾನಿಯಾಗುತ್ತದೆ.
ಕಣೆ ನೊಣದ ಹತೋಟಿಗಾಗಿ ರೈತರು ಪ್ರತಿ ಎಕರೆ ಭತ್ತದ ತಾಕಿಗೆ 10 ಕಿ.ಗ್ರಾಂ. ಫಿಸ್ತೂಲ್ 0.3 ಜಿಆರ್ ಹರಳನ್ನು ಮಜ್ಜಿಗೆ ಹಾಕಬೇಕು ಅಥವಾ 0.3 ಗ್ರಾಂ ಥೈಯಾಮಿಥಾಕ್ಸಮ್ 25 ಡಬ್ಲ್ಯುಜಿ ಕೀಟನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಸಿಂಪಡಣೆಗೆ ಮುಂಚೆ ಗದ್ದೆಯಲ್ಲಿ ನೀರು ತೆಗೆದು, ಸಿಂಪಡಣಾ ದ್ರಾವಣ ಭತ್ತದ ಬುಡಕ್ಕೆ ಬೀಳುವಂತ ಸಿಂಪಡಿಸಬೇಕು. 60 ದಿನಗಳ ಅವಧಿಯ ನಂತರ ಭತ್ತದ ಬೆಳೆಗೆ ಈ ಕೀಟದ ಹತೋಟಿಗಾಗಿ ಯಾವುದೇ ಸಿಂಪಡಣೆ ಕೈಗೊಳ್ಳುವ ಅವಶ್ಯಕತೆ ಇರುವುದಿಲ್ಲ.
ಭತ್ತದ ಕಣೆ ಹುಳುವಿನ ಜೊತೆಗೆ ಅಲ್ಲಲ್ಲಿ ದಂಡಾಣು ( Bactrial leaf blight ) ರೋಗ, ಕಾಡಿಗೆ ರೋಗ ಹಾಗೂ ಕಾಂಡ ಕೊಳೆ ರೋಗಗಳು ಕಂಡು ಬಂದಿರುತ್ತವೆ. ದಂಡಾಣು ರೋಗದ ಹತೋಟಿಗೆ 0.1 ಗ್ರಾಂ ಸ್ಪಷ್ಟೊಸೈಕ್ಲಿನ್ + 00 ಗ್ರಾಂ ಮೈಲುತುತ್ತ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಕಾಡಿಗೆ ರೋಗದ ಹತೋಟಿಗಾಗಿ ಮುಂಜಾಗ್ರತ ಕ್ರಮವಾಗಿ ಭತ್ತದ ಬೆಳೆ ಹೂವಾಡುವ ಮೊದಲು ಸಂಯುಕ್ತ ಶಿಲೀಂದ್ರನಾಶಕವಾದ 0.4 ಗ್ರಾಂ ಟೆಲ್ಕುನಾರೋಲ್ S05 + ಟ್ರೈಫ್ಲೋಕ್ಷಿಸ್ಟ್ರೋಬಿನ್ ಶೇ.25 ಡಬ್ಲುಜಿ ಅಥವಾ 1.0 ಮಿಲಿ, ಪ್ರೋಪಿಕೊನಜೋಲ್ ಶಿಲೀಂದ್ರನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು. ಕಾಂಡ ಕೊಳೆ ರೋಗದ ನಿರ್ವಹಣೆಗೆ 1,5 ಮಿ.ಲೀ ಥೈಯಾಫ್ಲುಜಮೈಡ್ ಅಥವಾ 10 ಗ್ರಾಂ ಥೈಯಾಷನೇಟ್ ಮೀಥೈಲ್ ಶೀಲಿಂದ್ರನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕೆಂದು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ದೇಸಾಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button