ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು:ಈಶ್ವರಪ್ಪ
ಶಿವಮೊಗ್ಗ: ಬೆಳಗಾವಿ ಲೋಕಸಭಾ ಕ್ಷೇತ್ರ ಸೇರಿದಂತೆ ಇದೇ 17ರಂದು ನಡೆಯಲಿರುವ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸುವುದು ನಿಶ್ಚಿತ ಎಂದು ಪಕ್ಷದ ಹಿರಿಯ ನಾಯಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಗುರುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಚುನಾವಣೆ ಅಂದರೆ ಅಲ್ಲಿ ಬಿಜೆಪಿ ಪಕ್ಷ ಗೆಲುವುದು ಪೂರ್ವದಲ್ಲಿ ಸೂರ್ಯ ಉದಯಸಿದಷ್ಟು ನಿಶ್ಚಿತ. ಈ ಹಿಂದೆ ಲೋಕಸಭೆ ಚುನಾವಣೆ ನಂತರ ನಡೆದ ಎಲ್ಲ ಉಪ ಚುನಾವಣೆಗಳಲ್ಲಿ ನಾವು ಜಯಸಾಧಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲೇ ಸ್ಪರ್ಧಿಸಿ ಸೋತು ಅಧಿಕಾರ ಕಳೆದುಕೊಂಡಿದ್ದಾರೆ. ಅವರಿಗೆ ಸ್ವಲ್ಪವೂ ಮಾನ, ಮಾರ್ಯಾದೆ ಇಲ್ಲ. ಚುನಾವಣೆಯಲ್ಲಿ ಜನ ಸೋಲಿಸಿದ್ದಾರೆ ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲದೆ ಬಾಯಿಗೆ ಬಂದAತೆ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಕೋವಿಡ್ ಬಗ್ಗೆ ರಾಜ್ಯ ಸರ್ಕಾರ ಕರೆಯಲಿರುವ ಸರ್ವ ಪಕ್ಷ ಸಭೆಯಿಂದ ಯಾವುದೇ ಪ್ರಯೋಜನವಿಲ್ಲ ಎನ್ನುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ, ವಿಧಾನಸಭೆ ವಿಸರ್ಜಿಸಿ ಎಂದು ಹೇಳುತ್ತಾರೆ. ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಜ್ಯದಲ್ಲಿ ತುರ್ತಾಗಿ ಅಧಿಕಾರಕ್ಕೆ ಬರಬೇಕು. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಯೋಚನೆ ಇಲ್ಲ ಎಂದು ಟೀಕಿಸಿದರು.
ರಾಜ್ಯದ ಜನರ ಹಿತದೃಷ್ಟಿಯಿಂದ ಪ್ರತಿಪಕ್ಷವಾಗಿ ರಾಜ್ಯ ಸರ್ಕಾರಕ್ಕೆ ಸಲಹೆ- ಸೂಚನೆ ನೀಡುವುದನ್ನು ಬಿಟ್ಟು ವಿಧಾನಸಭೆ ವಿಸರ್ಜಿಸಿ ಎನ್ನುವ ಸಿದ್ರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮುಂದಿನ ಜನ್ಮದಲ್ಲೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.




