ಹೋಟೆಲ್ ನಲ್ಲಿ ಭೀಕರ ಅಗ್ನಿ ಅವಘಡ; ಆರು ಮಂದಿ ಮೃತ್ಯು, 20 ಜನರ ರಕ್ಷಣೆ

ಪಾಟ್ನಾ: ರಾಜಧಾನಿ ಪಾಟ್ನಾದ ಹೋಟೆಲ್ ಒಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 6 ಜನರು ಸಾವನ್ನಪ್ಪಿದ್ದಾರೆ. ಪಾಟ್ನಾ ರೈಲ್ವೆ ನಿಲ್ದಾಣದ ಬಳಿ ಇರುವ ಹೋಟೆಲ್ ಒಂದರಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿ ಈ ದುರಂತ ಸಂಭವಿಸಿದೆ.

ಪಾಟ್ನಾ ಜಂಕ್ಷನ್​ ರೈಲ್ವೆ ನಿಲ್ದಾಣದ ಸಮೀಪದಲ್ಲಿರುವ ಹೋಟೆಲ್​ನಲ್ಲಿ ಅಗ್ನಿ ಅಪಘಾತ ನಡೆದಿದೆ. ರಕ್ಷಣಾ ಕಾರ್ಯಚರಣೆ ಮುಂದುವರೆದಿದ್ದು, 20ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ.

ಅಗ್ನಿ ಅವಘಡದಿಂದಾಗಿ ಕಟ್ಟಡದ ಮುಂಭಾಗದಲ್ಲಿರುವ ಸೇತುವೆ ಮೇಲೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸ್ಟೇಷನ್ ರಸ್ತೆಯೂ ಸಂಪೂರ್ಣ ಬಂದ್ ಆಗಿತ್ತು. ಬೆಂಕಿ ಕಾಣಿಸಿಕೊಂಡ ಸುಮಾರು ಒಂದೂವರೆ ಗಂಟೆಗಳ ನಂತರ ಮೃತದೇಹಗಳನ್ನು ಹೊರ ತೆಗೆಯಲಾಯಿತು.

ಪಾಲ್ ಹೋಟೆಲ್‌ನಲ್ಲಿ ಬೆಂಕಿ ಅವಘಡದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಪಾಟ್ನಾ ಎಸ್ ಪಿ ರಾಜೀವ್ ಮಿಶ್ರಾ ಖಚಿತಪಡಿಸಿದ್ದಾರೆ. ಸತ್ತವರಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಪುರುಷರು ಸೇರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಅಡುಗೆ ಕೋಣೆಯಲ್ಲಿ ಕಾಣಿಸಿಕೊಂಡ ಬೆಂಕಿ ನಾಲ್ಕು ಅಂತಸ್ತಿನ ಕಟ್ಟಡವನ್ನು ಆವರಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಸಿಲಿಂಡರ್ ಸ್ಫೋಟದಿಂದ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

Latest Indian news

Popular Stories