ಕಾಪು: ಪತ್ನಿ ಕುದಿಯುವ ನೀರಿನಲ್ಲಿ ಮೆಣಸಿನ ಹುಡಿ ಬೆರೆಸಿ ಪತಿಯ ಮೇಲೆ ಎಸೆದ ಕಾರಣ ಪತಿಗೆ ಗಂಭೀರ ಗಾಯವಾದ ಕುರಿತು ವರದಿಯಾಗಿದೆ.
ಮೊಹಮ್ಮದ್ ಆಸೀಫ್ (22) ಉಡುಪಿ ಇವರು 11 ತಿಂಗಳ ಹಿಂದೆ ಉಡುಪಿ ತಾಲೂಕು ಮಣಿಪುರ ಗ್ರಾಮದ ಗುಜ್ಜಿ ಎಂಬಲ್ಲಿನ ನಿವಾಸಿ ಹುಸೈನ್ ರವರ ಮಗಳಾದ ಅಫ್ರೀನ್ ರವರನ್ನು ಮದುವೆಯಾಗಿದ್ದು, ಮದುವೆಯಾದ ಬಳಿಕ ಅಫ್ರೀನ್ ಳು ಒಂದುವರೆ ತಿಂಗಳು ಮೊಹಮ್ಮದ್ ಆಸೀಫ್ ರವರ ಮನೆಯಲ್ಲಿದ್ದು, ಆ ಬಳಿಕ ಗಂಡನ ಮನೆಯಲ್ಲಿ ಇರಲು ಇಷ್ಟವಿಲ್ಲವೆಂದು ಮಣಿಪುರದ ತನ್ನ ತವರು ಮನೆಗೆ ಬಂದಿದ್ದರು. ಮೊಹಮ್ಮದ್ ಆಸೀಫ್ ರವರಿಗೂ ಕೂಡಾ ತಾನು ಬೇಕಾದಲ್ಲಿ ತನ್ನ ಮನೆಯಲ್ಲಿಯೇ ಇರುವಂತೆ ತಿಳಿಸಿದ ಮೇರೆಗೆ ಮೊಹಮ್ಮದ್ ಆಸೀಫ್ ರವರು ಸುಮಾರು 9 ತಿಂಗಳಿನಿಂದ ಹೆಂಡತಿಯ ಮನೆಯಲ್ಲಿಯೇ ವಾಸವಾಗಿದ್ದರು.
ದೂರಿನಲ್ಲಿ ತಿಳಿಸಿರುವ ಪ್ರಕಾರ, ” ಅಫ್ರೀನ್ ಳಿಗೆ ಮೊಹಮ್ಮದ್ ಆಸೀಫ್ ರವರು ಬೇರೆ ಹುಡುಗಿಯೊಂದಿಗೆ ಸಂಬಂಧ ಹೊಂದಿರುವುದಾಗಿ ಅನುಮಾನವಿದ್ದು, ಈ ಬಗ್ಗೆ ಯಾವಾಗಲೂ ಜಗಳವಾಡುತ್ತಿದ್ದಳು. ದಿನಾಂಕ 16/09/2023 ರಂದು ಮಧ್ಯಾಹ್ನ 12:00 ಗಂಟೆಗೆ ಅಫ್ರೀನ್ ರವರು ಮೊಹಮ್ಮದ್ ಆಸೀಫ್ ರವರ ಮೊಬೈಲ್ ನ್ನು ನೋಡುತ್ತಿದ್ದು, ಮೊಹಮ್ಮದ್ ಆಸೀಫ್ ರವರು ಹೊರಗಡೆ ಹೋಗಲು ಇದ್ದ ಕಾರಣ ಹೆಂಡತಿಯ ಕೈಲಿದ್ದ ಮೊಬೈಲ್ ನ್ನು ಎಳೆದುಕೊಂಡಿದ್ದು, ಆ ಸಮಯ ಅಫ್ರೀನ್‌ಳು ಮೊಹಮ್ಮದ್ ಆಸೀಫ್ ರವರ ಜೊತೆ ಜಗಳ ಮಾಡಿ ಬಲಗೈ ಮೊಣಗಂಟಿನ ಬಳಿ ಒಳಮೈಗೆ ಕಚ್ಚಿರುತ್ತಾಳೆ. ದಿನಾಂಕ 17/09/2023 ರಂದು ಸಂಜೆ 6:45 ಗಂಟೆಗೆ ಮೊಹಮ್ಮದ್ ಆಸೀಫ್ ರವರು ಬಾತ್ ರೂಮ್ ನಲ್ಲಿ ಸ್ನಾನ ಮಾಡುತ್ತಿದ್ದ ಸಮಯ ಅಫ್ರೀನ್‌ಳು ಹೊರಗಿನಿಂದ ಬಾಗಿಲು ಬಡಿದಿದ್ದು, ಮೊಹಮ್ಮದ್ ಆಸೀಫ್ ರವರು ಬಾಗಿಲನ್ನು ತೆರೆದಾಗ ಅಫ್ರೀನ್ ಳು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದ ಸ್ಟೀಲಿನ ಪಾತ್ರೆಯಲ್ಲಿದ್ದ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರನ್ನು ಇವರ ಮೈ ಮೇಲೆ ಎರಚಿರುತ್ತಾಳೆ. ಮೊಹಮ್ಮದ್ ಆಸೀಫ್ ರವರು ಕೂಗಿಕೊಂಡು ಮನೆಯಿಂದ ಹೊರಗಡೆ ಓಡಿದ್ದು, ಆ ಸಮಯ ಹುಸೈನ್ ರವರು ಮೊಹಮ್ಮದ್ ಆಸೀಫ್ ರವರನ್ನು ಸಮಧಾನಪಡಿಸಿ ಮನೆಯೊಳಗೆ ಕರೆದುಕೊಂಡು ಹೋಗಿರುತ್ತಾರೆ. ಅಫ್ರೀನ್ ಳು ಮೈಮೇಲೆ ಬಿಸಿ ನೀರನ್ನು ಹಾಕಿದ ಪರಿಣಾಮ ಮೊಹಮ್ಮದ್ ಆಸೀಫ್ ರವರ ಎಡ ಬದಿಯ ಮುಖ, ದೇಹ, ಎಡಗೈ, ಎಡ ಬದಿಯ ಎದೆ, ಬೆನ್ನು ಬಲಕೈ ಗೆ ಗುಳ್ಳೆ ಎದ್ದಿದ್ದು, ಈ ಬಗ್ಗೆ ಆಸ್ಪತ್ರೆಗೆ ಹೋಗುತ್ತೇನೆಂದು ತಿಳಿಸಿದಾದ ಅಫ್ರೀನ್, ಅತ್ತೆ ಮೈಮುನಾ, ಮಾವ ಹುಸೈನ್ ಹಾಗೂ ನೆರೆಮನೆಯ ಲತೀಫ್ ರವರು ಸೇರಿ ಮೊಹಮ್ಮದ್ ಆಸೀಫ್ ರವರನ್ನು ಹೊರಗಡೆ ಹೋಗಲು ಬಿಡದೆ ಮನೆಯ ರೂಮಿನಲ್ಲಿಯೇ ಕೂಡಿ ಹಾಕಿರುತ್ತಾರೆ. ಅಲ್ಲದೇ ಅಫ್ರೀನ್‌ಳು ಮೊಹಮ್ಮದ್ ಆಸೀಫ್ ರವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುತ್ತಾಳೆ. ದಿನಾಂಕ 18/09/2023 ರಂದು ಮಧ್ಯಾಹ್ನ 3:00 ಗಂಟೆಗೆ ಉಳ್ಳಾಲದ ನಿವಾಸಿ ಜಮಾತ್ ಎಂಬುವವನು ಮೊಹಮ್ಮದ್ ಆಸೀಫ್ ರವರಿಗೆ ಕರೆ ಮಾಡಿ ಕೇಸ್ ಕೊಟ್ಟರೆ ನಿನ್ನನ್ನು ಬಿಡುವುದಿಲ್ಲ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ. ಬಳಿಕ ಮೊಹಮ್ಮದ್ ಆಸೀಫ್ ರವರು ತನ್ನ ಬಾವ ಶಫಿ ಎಂಬುವವರಿಗೆ ಫೋನ್ ಮಾಡಿ ವಿಷಯ ತಿಳಿಸಿದಂತೆ ಸಂಜೆ 4:00 ಗಂಟೆಗೆ ಮನೆಯ ಬಳಿ ಹೋಗಿ ಮನೆಯವರೊಂದಿಗೆ ಮಾತನಾಡಿ ಮೊಹಮ್ಮದ್ ಆಸೀಫ್ ರವರನ್ನು ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 155/2023 ಕಲಂ: 325, 342, 504, 506, 507 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುವುದಾಗಿದೆ.