ಚಳಿಯೊಂದಿಗೆ ಈ ಜಿಲ್ಲೆಗಳಲ್ಲಿ ಐದು ದಿನ ಮಳೆ ಸಾಧ್ಯತೆ

ಬೆಂಗಳೂರು: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳು, ಮಲೆನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮುಂದಿನ 5 ದಿನ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.

ಕೆಲವು ಕಡೆ ಸಾಧಾರಣ ಮಳೆಯಾದರೆ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯೂ ಆಗಬಹುದು ಎನ್ನುವ ಮುನ್ನೆಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರ ನೀಡಿದೆ.

ಇದರ ನಡುವೆ ಕರ್ನಾಟಕದಲ್ಲಿ ಚಳಿಯ ಪ್ರಮಾಣವೂ ಹೆಚ್ಚಾಗಿದೆ. ಹಲವು ಭಾಗಗಳಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಕುಸಿದಿದೆ. ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಚಳಿ ಹೆಚ್ಚಾಗಿದ್ದು, ವಿಜಯಪುರದಲ್ಲಿ ಅತಿ ಕಡಿಮೆ ಅಂದರೆ 9.6 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ಶುಕ್ರವಾರ ದಾಖಲಾಗಿದೆ.

ಡಿ.16ರ ಶನಿವಾರ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರವಾಗಿ ಮಳೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಮಲೆನಾಡಿನ ಚಿಕ್ಕಮಗಳೂರು, ಹಾಸನ ಭಾಗದಲ್ಲಿ ಮಳೆಯಾಗಬಹುದು. ಇನ್ನು ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣ ಕಂಡು ಬರಲಿದೆ. ಇದೇ ರೀತಿಯಲ್ಲಿ ಉತ್ತರ ಒಳನಾಡಿನ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ ಭಾಗಗಳಲ್ಲೂ ಒಣ ಹವೆಯೇ ಇರಲಿದ.

ಡಿ.17 ರ ಭಾನುವಾರದಂದು ಕರಾವಳಿಯ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಒಳನಾಡಿನ ಜಿಲ್ಲೆಗಳಾದ ಬೆಂಗಳೂರು, ಮಲೆನಾಡು ಭಾಗದಲ್ಲೂ ಮಳೆಯಾಗಬಹುದು. ಆದರೆ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ವಾತಾವರಣ ಇಲ್ಲ. ಇಲ್ಲಿ ಒಣ ಹವೆ ಮುಂದುವರಿಯಲಿದೆ.

ಡಿ.18ರ ಸೋಮವಾರದಂದು ಗುಡುಗು ಸಹಿತ ಮಳೆಯಾಗುವ ಸೂಚನೆ ಇದೆ. ಅಂದು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಇರಲಿದೆ. ಮಲೆನಾಡು ಭಾಗದಲ್ಲಿ ಗುಡುಗಿನಿಂದ ಕೂಡಿದ ಮಳೆ ಅಲ್ಲಲ್ಲಿ ಆಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಕರಾವಳಿ ಭಾಗದ ಮೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಅಂದು ಹಗುರವಾಗಿ ಮಳೆಯಾಗಬಹುದು. ಉತ್ತರ ಕರ್ನಾಟಕದ ಕೆಲವು ಕಡೆಗಳಲ್ಲಿ ಸೋಮವಾರದಂದು ಹಗುರ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ.

ಡಿ.19ರ ಮಂಗಳವಾರದಂದು ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರವಾಗಿ ಮಳೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಡಿ.20 ರ ಬುಧವಾರದಂದು ಕರಾವಳಿಯ ಮೂರು ಜಿಲ್ಲೆಗಳ ಒಂದೆರಡು ಭಾಗಗಳಲ್ಲಿ ಹಗುರವಾಗಿ ಮಳೆಯಾಗಬಹುದು. ದಕ್ಷಿಣ ಒಳನಾಡಿನ ಬೆಂಗಳೂರು, ಮಲೆನಾಡು ಭಾಗಗಳಲ್ಲೂ ಹಗುರವಾಗಿ ಮಳೆಯಾಗುವ ಸೂಚನೆಯಿದೆ. ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಒಣ ಹವೆಯ ವಾತಾವರಣ ಕಂಡು ಬರಲಿದೆ.

ಈ ಅವಧಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ಎಲ್ಲೂ ಇಲ್ಲ. ಆದರೆ ಸೋಮವಾರ ರಾತ್ರಿ ಹಾಗೂ ಮಂಗಳವಾರಂದು ದಕ್ಷಿಣ ಒಳನಾಡಿನ ಒಂದೆರಡು ಮಾತ್ರ ಗುಡುಗು ಮಿಂಚಿನ ವಾತಾವರಣ ಇರಲಿದೆ.

ಬೆಂಗಳೂರು ಮಳೆ
ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳಲ್ಲಿ ಅಂದರೆ ಶನಿವಾರ ಹಾಗೂ ಭಾನುವಾರ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಎರಡೂ ದಿನವೂ ಅಲ್ಲಲ್ಲಿ ಹಗುರವಾಗಿ ಮಳೆ ಯಾಗಬಹುದು. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಗಿನ ಜಾವವೇ ಮಂಜು ಮುಸುಕಿದ ವಾತಾವರಣ ಇರಬಹುದು. ಎರಡೂ ದಿನದಲ್ಲೂ ಬೆಂಗಳೂರಿನ ಉಷ್ಣಾಂಶದಲ್ಲಿ ಕೊಂಚ ಇಳಿಕೆ ಕಾಣಲಿದೆ. ಗರಿಷ್ಠ ಉಷ್ಣಾಂಶವು 27 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಕನಿಷ್ಠ ಉಷ್ಣಾಂಶವು 17 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಕಾಣಲಿದೆ. ಅಂದರೆ ಕನಿಷ್ಠ ಉಷ್ಣಾಂಶದಲ್ಲಿ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗಲಿದೆ.

ಕುಸಿದ ಉಷ್ಣಾಂಶ
ಬೆಂಗಳೂರು, ಮೈಸೂರು ಮಾತ್ರವಲ್ಲದೇ ಹಲವು ಕಡೆಗಳಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಇಳಿಕೆ ಕಂಡು ಬಂದಿರುವುದರಿಂದ ಚಳಿಯ ಪ್ರಮಾಣ ಅಧಿಕವಾಗಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಚಳಿ ತೀವ್ರತೆ ಹೆಚ್ಚಿದೆ.

ಕರ್ನಾಟಕದ ಸಮತಟ್ಟಾದ ಪ್ರದೇಶಗಳಲ್ಲಿ ಅತಿ ಕಡಿಮೆ ಉಷ್ಣಾಂಶವು ವಿಜಯಪುರದಲ್ಲಿ ದಾಖಲಾಗಿದೆ. ಅದೂ ಈ ವರ್ಷದ ಅತಿ ಕಡಿಮೆ 9.6 ಡಿಗ್ರಿ ಸೆಲ್ಸಿಯಸ್‌ ಕಂಡು ಬಂದಿದೆ. ಈ ವರ್ಷದಲ್ಲಿ ಇದುವರೆಗೂ ವಿಜಯಪುರದಲ್ಲಿ12 ಡಿಗ್ರಿ ಸೆಲ್ಸಿಯಸ್‌ ಕಡಿಮೆ ಉಷ್ಣಾಂಶವಾಗಿತ್ತು. ಹಿಂದೆಲ್ಲಾ 7 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದ ಉದಾಹರಣೆಗಳೂ ಈ ಭಾಗದಲ್ಲಿವೆ.

Latest Indian news

Popular Stories