VIJAYAPURA | ರೈತ ಮುಖಂಡ ಹೆಗಡೆ ಮೇಲೆ ಹಲ್ಲೆ

ಬಾಗಲಕೋಟೆ : ರೈತ ಮುಖಂಡ ಯಲ್ಲಪ್ಪ‌ ಹೆಗಡೆ ಮೇಲೆ ಅಪರಿಚಿತರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಸೋಮವಾರ ಬೆಳಗ್ಗೆ ಯಲ್ಲಪ್ಪ‌ ಹೆಗಡೆ ಬೀಳಗಿ ಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ಮುಧೋಳ ತಾಲೂಕಿನ ಇಂಗಳಗಿ ಕ್ರಾಸ್‌ನಲ್ಲಿ ಮುಖಕ್ಕೆ ಮಾಸ್ಕ್ ಹಾಕಿ ಬಂದ ಐವರು ಅಪರಿಚಿತರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯಲ್ಲಿ ಯಲ್ಲಪ್ಪ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಮುಧೋಳದ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.

ನಿರಾಣಿ-ಹೆಗಡೆ ಕಿತ್ತಾಟ :
ವಿಧಾನಸಭಾ ಚುನಾವಣೆಯ ವೇಳೆ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಯಲ್ಲಪ್ಪ ಹೆಗಡೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. 5 ಕೋಟಿ ರೂಪಾಯಿ ಪರಿಹಾರ ಕೋರಿ ಲೀಗಲ್ ನೋಟಿಸ್ ಕಳಿಸಿದ್ದರು.
ನಿರಾಣಿ ಅವರು ಪರಿಹಾರ ಕೇಳಿದ್ದಕ್ಕೆ ಭಿಕ್ಷಾಟಣೆ ಮೂಲಕ ಹಣ ಸಂಗ್ರಹಿಸಿ ನೀಡಲು ಯಲ್ಲಪ್ಪ ಮುಂದಾಗಿದ್ದರು. ಬೀಳಗಿ ಪಟ್ಟಣದಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಭಿಕ್ಷಾಟಣೆ ನಡೆಸಲು ತೀರ್ಮಾನಿಸಿದ್ದರು. ಅದಕ್ಕೂ ಮುನ್ನ ಯಲ್ಲಪ್ಪ ಹೆಗಡೆ ಮೇಲೆ ಹಲ್ಲೆ ನಡೆದಿದೆ. ಯಾರು, ಯಾವ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ. ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

ಸಚಿವ ತಿಮ್ಮಾಪುರ ಸೂಚನೆ:
ರೈತ ಮುಖಂಡ ಯಲ್ಲಪ್ಪ ಹೆಗಡೆ ಮೇಲಿನ ದಾಳಿಗೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಪ್ರಕರಣ ಸಂಬಂಧದ ಮಾಹಿತಿ ಪಡೆದರು. ಕೂಡಲೇ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಂತೆ ಎಸ್‌ಪಿ ಅವರಿಗೆ ಸೂಚಿಸಿದ್ದಾರೆ. ವೈದ್ಯರೊಂದಿಗೂ ಮಾತನಾಡಿ ಯಲಪ್ಪ ಹೆಗಡೆ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು, ಗುಣಮಟ್ಟದ ಚಿಕಿತ್ಸೆ ನೀಡುವಂತೆ ಸಚಿವ ಆರ್ ಬಿ ತಿಮ್ಮಾಪೂರ ಅವರು ಸೂಚಿಸಿದರು.

Latest Indian news

Popular Stories