ಬಾಗಲಕೋಟೆ: ಹೊರಗಿನವರಿಗೆ ಮಣೆ ಹಾಕಲು ಹೊರಟ ಜಿಲ್ಲೆಯ ಮುಖಂಡರ ವಿರುದ್ಧ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿ ವೀಣಾ ಕಾಶಪ್ಪನವರ ಬೆಂಬಲಿಗರು ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.
ಪಕ್ಷ ಸಂಘಟನೆಗಾಗಿ ಜಿಲ್ಲಾದ್ಯಂತ ಓಡಾಡಿಕೊಂಡಿರುವ ಜಿ.ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಬೆಂಬಲಿಗರು ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಪಕ್ಷದ ನಾಯಕರ ವಿರುದ್ಧ ಘೋಷಣೆ ಕೂಗಿದರು.
ಪಕ್ಷದ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಲು ಮೆರವಣಿಗೆ ಮೂಲಕ ಆಗಮಿಸಿದ ವೀಣಾ ಕಾಶಪ್ಪನವರ ಬೆಂಬಲಿಗರನ್ನು ಪೊಲೀಸರು ಕಚೇರಿ ಬಳಿ ಬಿಡದೇ ನೂರು ಮೀಟರ್ ದೂರದಲ್ಲೆ ತಡೆದರು. ಪೊಲೀಸರ ಈ ನಡೆಗೆ ಕಾರ್ಯಕರ್ತರು ಸಿಟ್ಟಾಗಿ ಅವರ ವಿರುದ್ಶವೂ ಘೋಷಣೆ ಕೂಗಲಾರಂಭಿಸಿದರು. ಒಂದು ಹಂತದಲ್ಲಿ ಉಭಯತರ ಮಧ್ಯೆ ತೀವ್ರ ಮಾತಿನ ಚಕಮಕಿ ಕೂಡ ನಡೆಯಿತು.
ಪೊಲೀಸರು ಕಾರ್ಯಕರ್ತರ ಮಾತಿಗೆ ಜಗ್ಗದೆ ಹೋದಾಗ ” ನಮ್ಮ ಕಚೇರಿ ನಮ್ಮ ಹಕ್ಕು”, ನಮ್ಮ ಪಕ್ಷದ ಕಚೇರಿಯಲ್ಲಿ
ನಮ್ಮ ಮುಖಂಡರ ಜತೆ ಮಾತನಾಡಲು ಬಂದಿದ್ದೇವೆ. ನಾವು ಜಗಳ ಮಾಡಲು ಬಂದಿಲ್ಲ. ನಮ್ಮ ಕಚೇರಿಗೆ ಹೋಗಲು ಅವಕಾಶ ನೀಡುವುದಿಲ್ಲ ಅನ್ನಲು ನೀವ್ಯಾರು ಎಂದು ಪ್ರಶ್ನಿಸಿದರು.
ಸತತ ಎರಡು ತಾಸು ಕಾಲ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ವಾಗ್ವಾದ ನಡೆದರೂ ಪೊಲೀಸರು ಪ್ರತಿಭಟನಾಕಾರರಿಗೆ ಜಗ್ಗಲಿಲ್ಲ. ಆಗ ಜಿಲ್ಲೆಯ ಕಾಂಗ್ರೆಸ್ ನಾಯಕರ ವಿರುದ್ದ ಕೆಟ್ಟ ಪದಗಳನ್ನು ಬಳಕೆ ಮಾಡಿದ ಪ್ರಸಂಗ ನಡೆಯಿತು.
ಕೊನೆಗೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಬಳ್ಳಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸ್ವೀಕರಿಸಿ, ಪಕ್ಷದ ಅಧ್ಯಕ್ಷರ ಗಮನಕ್ಕೆ ತರುವ ಭರವಸೆ ನೀಡಿದರು.
ಆದರೂ ಕಾರ್ಯಕರ್ತರ ಆಕ್ರೋಶ ತಣಿಯಲಿಲ್ಲ. ಆಗ ಪಕ್ಷದ ಮುಖಂಡ ದೊಡಮನಿ ಇತರರು, ಮುಖಂಡರು ಪಕ್ಷದ ಯಾವ ಮುಖಂಡರಿಗೂ ಕ್ಷೇತ್ರದಲ್ಲಿ ಪ್ರವೇಶಿಸಲು ಅವಕಾಶ ನೀಡುವುದು ಬೇಡ ಎಂದಾಗ, ಅದಕ್ಕೊಪ್ಪಿದ ಎಲ್ಲರೂ ಅಲ್ಲಿಂದ ಜಾಗೆ ಖಾಲಿ ಮಾಡಿದರು.
ವೀಣಾ ಕಾಶಪ್ಪನವರ ಬೆಂಬಲಿಗರ ಕಚೇರಿ ಮುತ್ತಿಗೆ ಪ್ರಯತ್ನದಿಂದಾಗಿ ಟಿಕೆಟ್ ಫೈಟ್ ಇನ್ನಷ್ಟುಜೋರಾಗಲಿದ್ದು, ಕೋನೆ ಕ್ಷಣದ ವರೆಗೂ ಪ್ರಯತ್ನಗಳು ಮುಂದುವರಿಯುವ ಸಾಧ್ಯತೆಗಳು ಕಾಣಿಸುತ್ತಿವೆ.