ಅನ್ನ ಕೊಡುವ ಕಾಂಗ್ರೆಸ್‌ ಪಕ್ಷಕ್ಕೆ ವೋಟ್ ಕೊಡಿ: ಪ್ರಿಯಾಂಕಾ ಜಾರಕಿಹೊಳಿ

ಬೆಳಗಾವಿ(ಏ.25): ಅನ್ನ ಕಿತ್ತುಕೊಳ್ಳುವ ಪಕ್ಷಕ್ಕೆ ಮತ ಹಾಕುವುದಕ್ಕಿಂತ ಅನ್ನ ಕೊಡುವ ಪಕ್ಷಕ್ಕೆ ವೋಟ್ ಕೊಡಿ ಎಂದು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮನವಿ ಮಾಡಿದರು. ರಾಯಬಾಗ ಗ್ರಾಮೀಣ ಹಾಗೂ ಪಟ್ಟಣದಲ್ಲಿ ಹಮ್ಮಿಕೊಂಡ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರದ್ದು ಸುಳ್ಳಿನ ಪಕ್ಷ.
ಅವರನ್ನು ನಂಬಬೇಡಿ. ಅಗ್ಗಕ್ಕೆ ಸಿಗುತ್ತಿದ್ದ ಆಹಾರದ ಬೆಲೆ ಈಗ ಗಗನಕ್ಕೇರಿದೆ ಎಂದು ದೂರಿದರು.

ಕಾಂಗ್ರೆಸ್ ಸದಾ ಬಡವರ ಪರವಾಗಿದ್ದು, ಚುನಾವಣೆಗೂ ಮುನ್ನ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದೆ. ಸದ್ಯ ರಾಜ್ಯದಲ್ಲಿ ಪಕ್ಷದ ಪರ ಅಲೆಯಿದ್ದು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ಒಂದು ಬಾರಿ ಅವಕಾಶ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಕಳೆದ 15 ವರ್ಷದಿಂದ ರಾಜಕೀಯದಲ್ಲಿ ಸಕ್ರಿಯರಾಗಿರುವ ತಂದೆ ಸತೀಶ ಜಾರಕಿಹೊಳಿ ಅವರು ತಮ್ಮ ಮತಕ್ಷೇತ್ರದ ಗ್ರಾಮಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಶಾಲಾ ಕಾಲೇಜುಗಳನ್ನು ನಿರ್ಮಿಸಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ. ನನಗೂ ಇದೇ ರೀತಿಯಲ್ಲಿ ಜನರ ಸೇವೆ ಮಾಡುವ ಬಯಕೆಯಿದೆ. ಕಾಂಗ್ರೆಸ್ ಪಕ್ಷ ದೇಶದಲ್ಲಿ ಸ್ವಚ್ಛ ಆಡಳಿತ ನೀಡಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಕಾಂಗ್ರೆಸ್ ಪಕ್ಷದವರು. ಹೀಗಾಗಿ ದೇಶದ ಅಭಿವೃದ್ಧಿಗೆ ನಿಜವಾಗಿ ಶ್ರಮಿಸಿದವರು ಕಾಂಗ್ರೆಸ್ ಪಕ್ಷದವರು. ಕ್ಷೇತ್ರದಲ್ಲಿ ನನ್ನ ಗೆಲುವಿಗೆ ಶ್ರಮಿಸುವ ಮೂಲಕ ಕಾಂಗ್ರೆಸ್ ಕೈ ಬಲಪಡಿಸಬೇಕು. ಇದಕ್ಕಾಗಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಗೆಲುವಿಗೆ ಪಣತೊಡಬೇಕು ಎಂದು ಕೋರಿದರು.

Latest Indian news

Popular Stories