ರಾಜ್ಯದಲ್ಲಿ ₹ 17,836 ಕೋಟಿ ಬಂಡವಾಳ ಹೂಡಿಕೆ: 27,067 ಹೊಸ ಉದ್ಯೋಗ ಸೃಷ್ಟಿ- ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಇಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ (ಎಸ್‌ಎಚ್‌ಎಲ್‌ಸಿಸಿ) 63ನೇ ಸಭೆಯಲ್ಲಿ, ರಾಜ್ಯದಾದ್ಯಂತ 27,067 ಉದ್ಯೋಗಗಳನ್ನು ಸೃಷ್ಟಿಸುವ ₹ 17835.9 ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ ದೊರೆತಿದ್ದು, ಇದರಲ್ಲಿ ₹ 8220.05 ಕೋಟಿ ಮೊತ್ತದ 6 ಹೊಸ ಯೋಜನೆಗಳು ಮತ್ತು ₹ 9,615.85 ಕೋಟಿ ಮೊತ್ತದ ಹೆಚ್ಚುವರಿ ಬಂಡವಾಳ ಹೂಡಿಕೆಯ 8 ಯೋಜನೆಗಳು ಇವೆ.

ʼಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ, ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಹೊಸ ಹೂಡಿಕೆ ಮತ್ತು ಹೆಚ್ಚುವರಿ ಬಂಡವಾಳ ಹೂಡಿಕೆಯ 8 ಯೋಜನೆಗಳಿಗೆ ದೊರೆತಿರುವ ಅನುಮತಿಗಳಿಂದ ಈ ಜಿಲ್ಲೆಗಳಲ್ಲಿ ಒಟ್ಟಾರೆ ₹ 10,433.72 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಆಗಲಿದೆʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

‘ವಿಸ್ಟ್ರಾನ್ ಇನ್ಫೊಕಾಂ ಮ್ಯಾನುಫ್ಯಾಕ್ಚರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ₹ 2095 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ಫೋನ್‌ ತಯಾರಿಕಾ ಘಟಕ ಆರಂಭಿಸಲಿದೆ. ಇದರಿಂದ 21723 ಜನರಿಗೆ ಉದ್ಯೋಗಗಳು ದೊರೆಯಲಿವೆʼ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಭೆಯಲ್ಲಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ, ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆಗಿರುವ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಉಪಸ್ಥಿತರಿದ್ದರು.

ಹೊಸ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು : ರಾಜ್ಯದಲ್ಲಿ ಹೊಸದಾಗಿ ಬಂಡವಾಳ ಹೂಡಿಕೆ ಮಾಡಲಿರುವ ಒಟ್ಟು 6 ಕಂಪನಿಗಳಾದ – ಎಸ್‍ಟಿಟಿ ಗ್ಲೋಬಲ್ ಡೇಟಾ ಸೆಂಟರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಇಂಡಿಯನ್ ಕೇನ್ ಪವರ್ ಲಿಮಿಟೆಡ್, ಐ.ಸಿ.ಟಿ ಸರ್ವಿಸ್ ಮ್ಯಾನೇಜ್‌ಮೆಂಟ್‌ ಸೊಲ್ಯೂಷನ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಶ್ರೀ ಬಾಲಾಜಿ ಷುಗರ್ಸ್ ಮತ್ತು ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಏರ್ ಇಂಡಿಯಾ ಲಿಮಿಟೆಡ್‌ನ ಒಟ್ಟು ₹ 8220.05 ಕೋಟಿ ಮೊತ್ತದ ಬಂಡವಾಳ ಹೂಡಿಕೆಗಳಿಗೆ ಸಮಿತಿಯು ಒಪ್ಪಿಗೆ ನೀಡಿದೆ. ಈ ಹೊಸ ಯೋಜನೆಗಳಿಂದ ರಾಜ್ಯದಲ್ಲಿ ಒಟ್ಟು 27,067 ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.

Latest Indian news

Popular Stories