ನೇಹಾ ಕುರಿತ “ಲವ್’ ಹೇಳಿಕೆಗೆ ಕ್ಷಮೆ ಕೇಳಿದ ಗೃಹಸಚಿವ ಪರಮೇಶ್ವರ್

ಬೆಂಗಳೂರು,ಏ.20- ಹುಬ್ಬಳ್ಳಿಯ ನೇಹಾ ಪ್ರಕರಣದಲ್ಲಿ ತಮ್ಮ ಹೇಳಿಕೆಯಿಂದ ಪೋಷಕರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಕ್ಷಮೆ ಯಾಚಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಎಬಿವಿಪಿಯವರಿಗೆ ಸತ್ಯಾಸತ್ಯತೆ ಗೊತ್ತಿಲ್ಲ.ಬಿಜೆಪಿಯವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ತಾವು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದೇವೆ, ಬೇಜವಾಬ್ದಾರಿಯಿಂದ ಹೇಳಿಕೆ ನೀಡಿಲ್ಲ. ನಮಗೆ ಬಂದ ವರದಿಯನ್ನು ತಿಳಿಸಿದ್ದೇನೆ. ಪ್ರಕರಣದ ಬಗ್ಗೆ ತನಿಖೆಯಾಗಲಿದೆ. ಆ ವೇಳೆ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದರು. ನನ್ನ ಹೇಳಿಕೆಯಿಂದ ತಂದೆ-ತಾಯಿಯವರಿಗೆ, ಕುಟುಂಬದ ಸದಸ್ಯರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಆದರೆ ಸತ್ಯ ಮುಚ್ಚಿಡಲು ಸಾಧ್ಯವಿಲ್ಲ. ತನಿಖೆಯ ನಂತರ ಸತ್ಯಾಂಶ ತಿಳಿದುಬರಲಿದೆ ಎಂದು ಹೇಳಿದರು.

ಈ ಹಿಂದೆ ಮತದಾನದ ವೇಳೆ ಏನೆಲ್ಲಾ ನಡೆಯುತ್ತಿತ್ತು ಎಂಬುದನ್ನು ನಾನು ವಿಶ್ಲೇಷಣೆ ಮಾಡಿದ್ದೇನೆ. ಹಾಗೆಂದ ಮಾತ್ರಕ್ಕೆ ನಾನೇ ನಿಂತು ಚುನಾವಣಾ ಅಕ್ರಮ ಮಾಡಿಸಿದ್ದೇನೆ ಎಂದರ್ಥವಲ್ಲ. ಇದರ ಹಿಂದೆ ಮತಪೆಟ್ಟಿಗೆಗಳು ಅಪಹರಣವಾಗುತ್ತಿದ್ದವು. ಬೇರೆ ಬೇರೆ ಕ್ರಮಗಳು ನಡೆಯುತ್ತಿದ್ದವು. ಆ ಕಾರಣಕ್ಕಾಗಿ ಎಲೆಕ್ಟ್ರಾನಿಕ್ ಮತಯಂತ್ರಗಳು ಜಾರಿಗೆ ಬಂದವು ಎಂದು ಹೇಳಿದ್ದೇನೆ. ಈಗ ಮತಯಂತ್ರಗಳಲ್ಲೂ ಲೋಪಗಳಾಗುತ್ತಿವೆ.

Latest Indian news

Popular Stories