ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ ಕಟ್ಟಡಗಳಿಗೆ ರಾಜಕಾರಣಿಗಳ ಹೆಸರಿಡಲು ಆಕ್ಷೇಪ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ ಸರ್ಕಾರಿ ಕಟ್ಟಡ ಮತ್ತು ಇತರೆ ನಿರ್ಮಾಣಗಳಿಗೆ ಜೀವಂತವಾಗಿರುವ ರಾಜಕಾರಣಿಗಳ ಹೆಸರು ನಾಮಕರಣ ಮಾಡುವುದನ್ನು ಆಕ್ಷೇಪಿಸಿ ಸಲ್ಲಿಸಿದ ಅರ್ಜಿಯ ಕುರಿತಾಗಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ರಾಘವೇಂದ್ರ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗಿಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಸಿ ಆದೇಶ ನೀಡಲಾಗಿದೆ.

ದಾವಣಗೆರೆಯಲ್ಲಿ ಬಸ್ ನಿಲ್ದಾಣ, ಪಾರ್ಕ್, ಜಿಲ್ಲಾ ಪಂಚಾಯತಿ ಸಭಾಂಗಣ, ಮತ್ತಿತರ ಸರ್ಕಾರಿ ಕಟ್ಟಡಗಳಿಗೆ ಸ್ಥಳೀಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜುನ ಅವರ ಹೆಸರು ನಾಮಕರಣ ಮಾಡಿರುವುದರ ಬಗ್ಗೆ ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಅರ್ಜಿಯಲ್ಲಿ ಪ್ರತಿವಾದಿಗಳಾದ ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್, ದಾವಣಗೆರೆ ಜಿಲ್ಲಾಧಿಕಾರಿ, ನಗರಸಭೆ, ಮತ್ತು ಜಿಲ್ಲಾ ಪಂಚಾಯಿತಿಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್ ಮೇ 29ಕ್ಕೆ ವಿಚಾರಣೆ ಮುಂದೋಡಿದೆ.

ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ ಕಟ್ಟಡಗಳಿಗೆ ಜೀವಂತ ರಾಜಕಾರಣಿಗಳ ಹೆಸರು ಇಡಬಾರದು ಎಂದು 2012ರಲ್ಲಿ ಹೈಕೋರ್ಟ್ ಆದೇಶ ನೀಡಿದೆ. ಚನ್ನಗಿರಿಯ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಹೆಸರನ್ನು ತಾಲೂಕು ಕ್ರೀಡಾಂಗಣಕ್ಕೆ ಇಡಲಾಗಿದ್ದು, ಸರ್ಕಾರದ ಅನುದಾನದಲ್ಲಿ ಕಟ್ಟಿದ ಕ್ರೀಡಾಂಗಣಕ್ಕೆ ಮಾಡಾಳು ವಿರೂಪಾಕ್ಷಪ್ಪ ಆಟದ ಮೈದಾನ ಎಂದು ನಾಮಕರಣ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ಆದೇಶದಂತೆ ಹೆಸರು ಬದಲಾಯಿಸಿ ತಾಲೂಕು ಆಟದ ಮೈದಾನ ಎಂದು ನಾಮಕರಣ ಮಾಡಲಾಗಿತ್ತು.

Latest Indian news

Popular Stories