ಬೆಂಗಳೂರು: ಆಪ್ತನ ಮನೆಯಲ್ಲಿ 4.8 ಕೋಟಿ ರೂಪಾಯಿ ಹಣ ವಶಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ವಿರುದ್ಧ ಮತದಾರರಿಗೆ ಆಮಿಷ ಹಾಗೂ ಅನಗತ್ಯ ಪ್ರಭಾವದ ಆರೋಪದ ಮೇಲೆ ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ.
ಚಿಕ್ಕಬಳ್ಳಾಪುರದ ಫ್ಲೈಯಿಂಗ್ ಸ್ಕ್ವಾಡ್ಸ್ ತಂಡ (ಎಫ್‌ಎಸ್‌ಟಿ) ಕ್ರಮ ಕೈಗೊಂಡಿರುವುದಾಗಿ ಚುನಾವಣಾ ಆಯೋಗ ಮಾಹಿತಿ ನೀಡಿದೆ. 4. 8 ಕೋಟಿ ಮೌಲ್ಯದ ನಗದನ್ನು ಚಿಕ್ಕಬಳ್ಳಾಪುರದ ಎಫ್‌ಎಸ್‌ಟಿ ವಶಪಡಿಸಿಕೊಂಡಿರುವುದಾಗಿ ಶುಕ್ರವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರದ ರಾಜ್ಯ ಕಣ್ಗಾವಲು ತಂಡವು ಬಿಜೆಪಿ ಅಭ್ಯರ್ಥಿ ಕೆ ಸುಧಾಕರ್ ವಿರುದ್ಧ ಏಪ್ರಿಲ್ 25 ರಂದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದೆ. ಮತದಾರರಿಗೆ ಆಮಿಷ ಮತ್ತು ಅನಗತ್ಯ ಪ್ರಭಾವ ಆರೋಪಕ್ಕಾಗಿ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಆಯೋಗ ಫೋಸ್ಟ್ ಮಾಡಿದೆ.