ಕೋವಿಡ್ ಸೋಂಕಿತರಿಗೆ ಶಾಹೀನ್ ಶಿಕ್ಷಣ ಸಂಸ್ಥೆ ನೆರವು ನಿತ್ಯ 700 ಜನರಿಗೆ ಉಚಿತ ಆಹಾರ

ಬೀದರ್: ಕೋವಿಡ್ ವೇಳೆ ಜನರಿಗೆ ಒಂದಿಲ್ಲೊಂದು ರೀತಿಯಲ್ಲಿ ನೆರವಾಗುತ್ತ ಬಂದಿರುವ ಇಲ್ಲಿಯ ಶಾಹೀನ್ ಶಿಕ್ಷಣ ಸಂಸ್ಥೆಯು ಇದೀಗ ಮನೆಯಲ್ಲೇ ಉಳಿದು ಕೋವಿಡ್‍ಗೆ ಚಿಕಿತ್ಸೆ ಪಡೆಯುತ್ತಿರುವವರು ಹಾಗೂ ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರ ಸಂಬಂಧಿಕರಿಗೆ ಉಚಿತ ಆಹಾರ ಸೇವೆ ಒದಗಿಸುತ್ತಿದೆ.
ಹೋಂ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿರುವವರು, ಬ್ರಿಮ್ಸ್ ಕೋವಿಡ್ ಆಸ್ಪತ್ರೆ ಹಾಗೂ ಓಲ್ಡ್ ಸಿಟಿಯ ನೂರು ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಸೋಂಕಿತರ ಆರೈಕೆಯಲ್ಲಿರುವ ಅವರ ಸಂಬಂಧಿಕರು ಹಾಗೂ ಆರೋಗ್ಯ ಕಾರ್ಯಕರ್ತರು ಸೇರಿ ನಿತ್ಯ 700 ಜನರಿಗೆ ಆಹಾರ ಪೂರೈಸುತ್ತಿದೆ.
ಬೆಳಿಗ್ಗೆ 8ಕ್ಕೆ ಉತ್ತಮ ಗುಣಮಟ್ಟದ ರುಚಿಕಟ್ಟಾದ ಉಪಾಹಾರ, ಮಧ್ಯಾಹ್ನ 1.30 ಹಾಗೂ ಸಂಜೆ 7ಕ್ಕೆ ಊಟ ಸರಬರಾಜು ಮಾಡುತ್ತಿದೆ.
ಮೊಬೈಲ್ ಸಂಖ್ಯೆ 8970973758ಗೆ ಕರೆ ಮಾಡಿದ ಕೋವಿಡ್‍ಗೆ ಚಿಕಿತ್ಸೆ ಪಡೆಯುತ್ತಿರುವವರ ಮನೆ ಬಾಗಿಲಿಗೇ ಉಪಾಹಾರ ಹಾಗೂ ಆಹಾರ ತಲುಪಿಸಲಾಗುತ್ತಿದೆ. ಸದ್ಯ 700 ಜನರಿಗೆ ಆಹಾರ ಪೂರೈಸಲಾಗುತ್ತಿದೆ. ರಂಜಾನ್ ಪ್ರಯುಕ್ತ ಉಪವಾಸ ವ್ರತ ಆಚರಣೆಯಲ್ಲಿರುವವರಿಗೆ ಇಫ್ತಾರ್ ಪಾಕೇಟ್ ಸಹ ಕೊಡಲಾಗುತ್ತಿದೆ. ಬರುವ ದಿನಗಳಲ್ಲಿ 1,500 ಜನರಿಗೆ ಉಚಿತ ಆಹಾರ ಪೂರೈಸುವ ಗುರಿ ಇದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದ್ದಾರೆ.
ಬ್ರಿಮ್ಸ್ ಕೋವಿಡ್ ಆಸ್ಪತ್ರೆ ಹಾಗೂ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಿಗದಿತ ಸ್ಥಳದಲ್ಲಿ ಸೋಂಕಿತರ ಸಂಬಂಧಿಕರು, ಆರೋಗ್ಯ ಕಾರ್ಯಕರ್ತರಿಗೆ ಆಹಾರ ಪಾರ್ಸೆಲ್ ಕೊಡಲಾಗುತ್ತಿದೆ. ಶೀಘ್ರವೇ ನಗರದಲ್ಲಿ ಇನ್ನೂ ಒಂದೆರಡು ಸ್ಥಳ ಗುರುತಿಸಿ ಅಗತ್ಯ ಇರುವವರಿಗೆ ಆಹಾರ ಪೊಟ್ಟಣ ವಿತರಿಸಲಾಗುವುದು ಎಂದು ಹೇಳಿದ್ದಾರೆ.
ಕೋವಿಡ್ ನಿಯಂತ್ರಣಕ್ಕೆ ಬರುವವರೆಗೆ ಉಚಿತ ಆಹಾರ ವಿತರಣೆ ಮುಂದುವರಿಯಲಿದೆ. ಸಂಸ್ಥೆಯ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ಕೆ ಆಹಾರ ಧಾನ್ಯ ಕೊಡುವ ಹಾಗೂ ಇತರ ರೀತಿಯಲ್ಲಿ ನೆರವಾಗುವ ಮೂಲಕ ಕೈಜೋಡಿಸುವ ಭರವಸೆ ನೀಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಕೋವಿಡ್‍ನಿಂದ ಸಂಕಷ್ಟದಲ್ಲಿ ಇರುವವರಿಗೆ ಸಂಘ ಸಂಸ್ಥೆಗಳು, ದಾನಿಗಳು ಸಹಾಯಹಸ್ತ ಚಾಚಬೇಕು ಎಂದು ಅವರು ಮನವಿ ಮಾಡಿದ್ದಾರೆ.

Latest Indian news

Popular Stories