
ಬಜ್ಪೆ: ಯುವಕನಿಗೆ ಚೂರಿ ಇರಿತ
ಮಂಗಳೂರು: ಮಂಗಳೂರು ತಾಲೂಕಿನ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ ಎನ್ನಲಾದ ಘಟನೆಯೊಂದರಲ್ಲಿ, ನಾಲ್ವರು ದುಷ್ಕರ್ಮಿಗಳ ತಂಡವು ಯುವಕನೋರ್ವನ ಮೇಲೆ ಚೂರಿ ಇರಿದು ಗಾಯಗೊಳಿಸಿದೆ. ಮಾಹಿತಿಯ ಪ್ರಕಾರ ಒರ್ವನನ್ನು ವಶಕ್ಕೆ ಪಡೆಯಲಾಗಿದೆ.
ಎಡಪದವು ಪೂಪಾಡಿ ಕಲ್ಲು ನಿವಾಸಿ ಅಖಿಲೇಶ್ ಎಂಬಾತ ಇರಿತಕ್ಕೆ ಒಳಗಾದ ಯುವಕ ಎಂದು ತಿಳಿದುಬಂದಿದೆ. ದಾಳಿಯಿಂದಾಗಿ ಅವರ ಬಲಗೈಗೆ ಗಾಯಗಳಾಗಿವೆ ಎನ್ನಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಘಟನೆ ವಿವರ
ಸೋಮವಾರ ಸಂಜೆ ಅಖಿಲೇಶ್ ಅವರು ತಮ್ಮ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ಎಡಪದವು ಕಡೆಯಿಂದ ಮಂಗಳೂರಿನತ್ತ ತೆರಳುತ್ತಿದ್ದರು. ಇದೇ ಸಂದರ್ಭದಲ್ಲಿ, ಎಡಪದವು ಪ್ರದೇಶದಲ್ಲಿ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ನಾಲ್ವರು ಅಪರಿಚಿತ ದುಷ್ಕರ್ಮಿಗಳ ತಂಡವು ಏಕಾಏಕಿ ಅವರನ್ನು ತಡೆದು, ಚೂರಿಯಿಂದ ಇರಿದು ಹಲ್ಲೆ ನಡೆಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಹಲ್ಲೆಯ ನಂತರ ದುಷ್ಕರ್ಮಿಗಳು ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾರೆ. ಯುವಕನ ಬೊಬ್ಬೆ ಕೇಳಿದ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ತಕ್ಷಣ ಗಾಯಾಳು ಅಖಿಲೇಶ್ ಅವರನ್ನು ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೂಡುಬಿದಿರೆಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ದಾಳಿಗೆ ಒಳಗಾದ ಅಖಿಲೇಶ್ ಅವರು ಸ್ಥಳೀಯವಾಗಿ ಕೇಟರಿಂಗ್ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಬಜ್ಪೆ ಪೊಲೀಸರು ತಕ್ಷಣವೇ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ನಾಲ್ವರು ಭಾಗಿಯಾಗಿದ್ದು, ಎಲ್ಲರ ಗುರುತು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




