
ಕುಂದಾಪುರ, ಮಾ.25: ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗುಲ್ವಾಡಿ ಗ್ರಾಮದ ಅಬುಬಕ್ಕರ್ (48) ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ರೌಡಿ ಹಾಗೂ MOB ಆಸಾಮಿಯಾಗಿ ಗುರುತಿಸಿಕೊಂಡಿರುವ ಅಬುಬಕ್ಕರ್ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ಕುಂದಾಪುರ ಗ್ರಾಮಾಂತರ ಠಾಣೆಯ ಅಪರಾಧ ಕ್ರಮಾಂಕ 74/2024ರಡಿಯಲ್ಲಿ BNS ಕಲಂ 303(2) R/w 3(5), ಕರ್ನಾಟಕ ಪ್ರಿವೆನ್ಷನ್ ಆಫ್ ಸ್ಲಾಟರ್ ಅಂಡ್ ಪ್ರಿವೆನ್ಷನ್ ಆಫ್ ಕ್ಯಾಟಲ್ ಆರ್ಡಿನನ್ಸ್ ಕಾಯ್ದೆ–2020ರ ಕಲಂ 5, 12 ಹಾಗೂ ಪ್ರಿವೆನ್ಷನ್ ಆಫ್ ಕ್ರುವೆಲ್ಟಿ ಟು ಅನಿಮಲ್ಸ್ ಕಾಯ್ದೆ–1960ರ ಕಲಂ 11(1)(D) ಅನ್ವಯ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ವಿಧಿಸಲಾದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಹಿನ್ನೆಲೆ ಜಾಮೀನು ರದ್ದುಪಡಿಸುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಪರಿಗಣಿಸಿದ ನ್ಯಾಯಾಲಯ ಜಾಮೀನು ರದ್ದುಪಡಿಸಿ ರಿಮಾಂಡ್ ವಾರಂಟ್ ಜಾರಿಗೊಳಿಸಿತು.
ಅದರಂತೆ ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಏಪ್ರಿಲ್ 7ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.




