ಉ.ಕ : ಮತದಾನ ಜಾಗೃತಿಗೆ ಸ್ಕೂಟರ್ ಏರಿದ ಜಿಲ್ಲಾಧಿಕಾರಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾನದ ಮಹತ್ವ ಕುರಿತಂತೆ ಜಾಗೃತಿ ಮೂಡಿಸಲು ಶುಕ್ರವಾರ ನಡೆದ ಬೈಕ್ ಜಾಥಾ ಕಾರ್ಯಕ್ರಮದಲ್ಲಿ , ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಬಿರು ಬಿಸಿಲಿನಲ್ಲಿ ಹೆಲ್ಮೆಟ್ ಧರಿಸಿ, ಮತದಾನ ಜಾಗೃತಿಯ ಪ್ರದರ್ಶನ ಫಲಕದೊಂದಿಗೆ ಸ್ವತಃ ಸ್ಕೂಟರ್ ಚಲಾಯಿಸಿ ಎಲ್ಲರ ಗಮನ ಸೆಳೆದರು.


ಜಿಲ್ಲೆಯಲ್ಲಿ ಮೇ 7 ರಂದು ನಡೆಯುವ ಲೋಕಸಭಾ ಚುನಾಣೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ಸ್ವೀಪ್ ಕಾರ್ಯಕ್ರಮದಡಿ ಶುಕ್ರವಾರ. ಜಿ.ಪಂ. ಕಛೇರಿಯ ಆವರಣದಿಂದ ಆಯೋಜಿಸಿದ್ದ ಮೋಟಾರ್ ಸೈಕಲ್ (ಬೈಕ್) ಜಾಥಾಗೆ ಸ್ವೀಪ್ ಬಾವುಟ ತೋರುವ ಮೂಲಕ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು.


ಜಿಲ್ಲೆಯ ಎಲ್ಲಾ ಮತದಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ತಮ್ಮ ಮತದಾನದ ಹಕ್ಕು ಚಲಾಯಿಸಬೇಕು. ಜಿಲ್ಲೆಯ ಯಾವುದೇ ಅರ್ಹ ಮತದಾರರು ಮತದಾನದಿಂದ ಹೊರಗುಳಿಯಬಾರದು. ಜಿಲ್ಲೆಯ 85 ವರ್ಷ ಮೇಲ್ಪಟ್ಟವರು ಮತ್ತು ವಿಕಲಚೇತನರಿಗಾಗಿ ಈಗಾಗಲೇ ಆರಂಭಿಸಿರುವ ಮನೆಯಿಂದಲೇ ಮತದಾನ ಕಾರ್ಯಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದ್ದು , ಮೊದಲ ದಿನವೇ ಶೇ.50 ಕ್ಕೂ ಹೆಚ್ಚು ಮತದಾನ ನಡೆದಿದೆ. ಇದೇ ರೀತಿಯ ಉತ್ಸಾಹವನ್ನು ಮೇ 7 ರಂದು ನಡೆಯುವ ಮತದಾನ ದಿನದಂದು ಜಿಲ್ಲೆಯ ಎಲ್ಲಾ ಸಾರ್ವಜನಿಕರು ತೋರುವ ಮೂಲಕ ಉತ್ತರ ಕನ್ನಡ ಜಿಲ್ಲೆಯು ರಾಜ್ಯದಲ್ಲೇ ಅತೀ ಹೆಚ್ಚು ಮತದಾನ ನಡೆದ ಜಿಲ್ಲೆ ಎಂಬ ದಾಖಲೆ ಬರೆಯುವಂತಾಗಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಈಶ್ವರ ಕುಮಾರ ಕಾಂದೂ ಮಾತನಾಡಿ, ಜಿಲ್ಲೆಯ ಎಲ್ಲಾ ಅರ್ಹ ಮತದಾರರು ತಮ್ಮ ಕುಟುಂಬ ಸಮೇತ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ, ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಲು ಸಹಕರಿಸಬೇಕು ಎಂದರು.
ಬೈಕ್ ಜಾಥಾದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ ಅವರೊಂದಿಗೆ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ ಕೂಡ ಬೈಕ್ ಚಲಾಯಿಸಿ ಗಮನ ಸಳೆದರು. ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ 150 ಕ್ಕೂ ಅಧಿಕ ಮಂದಿ ಬೈಕ್ ಗಳಲ್ಲಿ ಜಾಥಾದಲ್ಲಿ ಸಂಚರಿಸಿದರು.


ಸದರಿ ಮೋಟಾರ್ ಸೈಕಲ್ (ಬೈಕ್) ಜಾಥಾ ಮೆರವಣಿಗೆಯು ಜಿಲ್ಲಾ ಪಂಚಾಯತ ಕಛೇರಿಯಿಂದ ಕೋರ್ಟ್ ರೋಡ್ (ನಮನ ಬೇಕರಿ ಎದುರು ರಸ್ತೆ) ಗೀತಾಂಜಲಿ ಚಿತ್ರ ಮಂದಿರ (ಹಬ್ಬುವಾಡ ರಸ್ತೆ) ,ಅಂಚೆ ಕಛೇರಿಯ ಮುಂಭಾಗ , ಬಾಂಡಿಶಿಟ್ಟಾ,
, ಟೋಲ್ ನಾಕಾ (ನ್ಯೂ ಹೈಸ್ಕೂಲ್), ಕಾಳಿ ರೀವರ್ ಗಾರ್ಡನ್ ವೃತ್ತ (ಕೋಡಿಬಾಗ್ ಕಾರವಾರ ಮುಖ್ಯ ರಸ್ತೆ) ಡಿ.ಹೆಚ್.ಓ ಕಛೇರಿಯ ಎದುರು ರಸ್ತೆಯಿಂದ ಜಿಲ್ಲಾ ಪಂಚಾಯತ ಕಾರವಾರದವರೆಗೆ ನಡೆಯಿತು. ಮೋಟಾರ್ ಸೈಕಲ್ (ಬೈಕ್) ಜಾಥಾ ಮೆರಣಿಗೆಗೆ ಕಾರ್ಯಕ್ರಮದ ಸುಗಮ ಸಂಚಾರಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
……..

Latest Indian news

Popular Stories