ತೈಲ ಬೆಲೆ ಏರಿಕೆ ವಿರುದ್ಧ ಜನಾಕ್ರೋಶವಿಲ್ಲ, ಕಾಂಗ್ರೆಸ್’ಗೆ ಮಾತ್ರ ಆಕ್ರೋಶ – ಸಚಿವ ಭಗವಂತ್ ಖೂಬಾ

ಬೆಂಗಳೂರು: ಬೆಲೆ ಏರಿಕೆ ಕುರಿತು ಜನರಿಗೆ ಆಕ್ರೋಶವಿಲ್ಲ. ಕಾಂಗ್ರೆಸ್ ಪಕ್ಷದವರಿಗೆ ಮಾತ್ರ ಆಕ್ರೋಶವಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು

ಬುಧವಾರ ಮಾತನಾಡಿದ ಅವರು, ಬೆಲೆ ಏರಿಕೆ ಕುರಿತ ಪ್ರಶ್ನೆಗೆ ಸಿಟ್ಟಿನಿಂದ ಪ್ರತಿಕ್ರಿಯಿಸಿದ ಅವರು, ‘ಎಲ್ಲಿದೆ ಬೆಲೆ ಏರಿಕೆ? ಜನರು ಪ್ರಶ್ನಿಸುತ್ತಿಲ್ಲ. ನೀವು ಮಾತ್ರ ಪ್ರಶ್ನಿಸುತ್ತಿದ್ದೀರಿ’ ಎಂದರು.

ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಜನರಿಗೆ ಸಮಸ್ಯೆಯಾಗಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಅವಧಿಗಿಂತಲೂ ಮೋದಿ ಸರ್ಕಾರದ ಅವಧಿಯಲ್ಲಿ ಜನರು ನೆಮ್ಮದಿಯಿಂದ ಇದ್ದಾರೆ. ಕಾಂಗ್ರೆಸ್ ಪಕ್ಷದವರು ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಉತ್ತರಿಸಿದರು. ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಪೆಟ್ರೊಲಿಯಂ ಉತ್ಪನ್ನ ಖರೀದಿಗೆ ಮಾಡಿದ್ದ ಸಾಲವನ್ನು ಈಗಿನ ಸರ್ಕಾರ ತೀರಿಸುತ್ತಿದೆ. ಹೀಗಾಗಿ ದರ ಹೆಚ್ಚಳ ಮಾಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ. ನವೆಂಬರ್ ಅಂತ್ಯದವರೆಗೂ ರೈತರ ಬೇಡಿಕೆ ಪೂರೈಸುವಷ್ಟು ರಸಗೊಬ್ಬರದ ದಾಸ್ತಾನು ಇದೆ ಎಂದು ಭಗವಂತ ಖೂಬ ಹೇಳಿದರು. ‘ರಾಜ್ಯಕ್ಕೆ ನವೆಂಬರ್ ಅಂತ್ಯದವರೆಗೆ 2.10 ಲಕ್ಷ ಟನ್ ರಸಗೊಬ್ಬರ ಅಗತ್ಯವಿದೆ. ಅಷ್ಟು ಪ್ರಮಾಣದ ದಾಸ್ತಾನು ರಾಜ್ಯದಲ್ಲಿದೆ’ ಎಂದರು.

33,000 ಟನ್ ಡಿಎಪಿ ರಸಗೊಬ್ಬರಕ್ಕೆ ಬೇಡಿಕೆ ಇದೆ. ರಾಜ್ಯದಲ್ಲಿ 36,500 ಟನ್ ಡಿಎಪಿ ದಾಸ್ತಾನು ಇದೆ. ಯೂರಿಯಾ ರಸಗೊಬ್ಬರದ ಕೊರತೆಯೂ ಇಲ್ಲ.‌ಹೆಚ್ಷಿನ ಪ್ರಮಾಣದಲ್ಲಿ ಕಾಂಪ್ಲೆಕ್ಸ್ ರಸಗೊಬ್ಬರದ ದಾಸ್ತಾನು ಇದೆ. ಯೂರಿಯಾ ಬದಲಿಗೆ ಅದನ್ನು ಬಳಸಬಹುದು ಎಂದರು.

ಡಿಎಪಿ ದರ ಮಾತ್ರ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಉಳಿದಂತೆ ಯಾವುದೇ ರಸಗೊಬ್ಬರದ ದರ ಏರಿಕೆಯಾಗಿಲ್ಲ. ಕಾಂಗ್ರೆಸ್ ಪಕ್ಷದವರು ರಾಜಕೀಯಕ್ಕಾಗಿ ರಸಗೊಬ್ಬರದ ಕೊರತೆಯಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ದರ ಏರಿಕೆ ವಿಚಾರದಲ್ಲೂ ಸುಳ್ಳು ಹಬ್ಬಿಸುತ್ತಿದ್ದಾರೆ ಎಂದು ದೂರಿದರು.

2008ರಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಆಗ ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಉಂಟಾಗಿತ್ತು.‌ ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ ಸೋಲುವ ಭಯದಿಂದಾಗಿ ಕಾಂಗ್ರೆಸ್ ಪಕ್ಷದವರು ಗೋಲಿಬಾರ್ ವಿಚಾರ ಮಾತ್ರ ಮಾತನಾಡುತ್ತಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದಾಗ, ಕೊರತೆಯನ್ನು ನೀಗಿಸಲು ಕರ್ನಾಟಕಕ್ಕೆ ಡಿಎಪಿ ಪೂರೈಕೆಯನ್ನು ಹೆಚ್ಚಿಸುವಂತೆ ಕೋರಿದ್ದರು. ಕಳೆದ ಕೆಲವು ತಿಂಗಳುಗಳಿಂದ ಡಿಎಪಿ ಕಚ್ಚಾವಸ್ತುಗಳು ಹೆಚ್ಚಾಗುತ್ತಿದ್ದರೂ, ಕೇಂದ್ರ ಸರ್ಕಾರವು ಬೆಲೆಯನ್ನು ಹೆಚ್ಚಿಸಿಲ್ಲ ಮತ್ತು ಪ್ರತಿ ಚೀಲವನ್ನು 1,200 ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ಖೂಬಾ ಹೇಳಿದರು.

ಇಂದಿನವರೆಗೆ ಕರ್ನಾಟಕದಲ್ಲಿ 22.33 ಲಕ್ಷ ಮೆ.ಟನ್ ಯೂರಿಯಾ ಲಭ್ಯವಿದೆ. ಅದೇ ರೀತಿ, 3.2 ಲಕ್ಷ ಮೆಟ್ರಿಕ್ ಟನ್ ಪೊಟ್ಯಾಷ್ ಲಭ್ಯವಿದೆ. ಮೈಸೂರು, ಹಾಸನ ಮತ್ತು ಕೊಡಗಿನಲ್ಲಿ ಕೊರತೆ ಬಗ್ಗೆ ಹೇಳಿದ್ದೆ, ಕೇಂದ್ರದಿಂದ 3,000 ಮೆಟ್ರಿಕ್ ಟನ್ ಖರೀದಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.

Latest Indian news

Popular Stories