ದೆಹಲಿ ಕೋಮು ಗಲಭೆ: ಫೆಸ್ಬುಕ್’ಗೆ ನೋಟಿಸ್

ಹೊಸದಿಲ್ಲಿ: 2020ರ ಫೆಬ್ರವರಿಯಲ್ಲಿ ನಡೆದ ಈಶಾನ್ಯ ದಿಲ್ಲಿ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿತ್ತರಗೊಂಡ ಫೋಟೊ ಮತ್ತು ಬರಹಗಳ ವಿಚಾರದಲ್ಲಿ ದಿಲ್ಲಿ ವಿಧಾನ ಸಭೆಯ ಶಾಂತಿ ಮತ್ತು ಸೌಹಾರ್ದ ಸಮಿತಿ ವಿಚಾರಣೆ ನಡೆಸಿದ್ದು, ಫೇಸ್‌ಬುಕ್‌ ಕಂಪನಿಯಿಂದ ವಿವರ ಬಯಸಿ ನೋಟಿಸ್‌ ನೀಡಲಾಗಿದೆ.

ನವೆಂಬರ್‌ 2 ರಂದು ಸಮಿತಿ ವಿಚಾರಣೆ ನಡೆಸಲಿದ್ದು, ಆ ವೇಳೆ ಪ್ರತಿನಿಧಿಯೊಬ್ಬರನ್ನು ಕಳಿಸಿಕೊಡುವಂತೆ ಫೇಸ್‌ಬುಕ್‌ಗೆ ಸೂಚಿಸಲಾಗಿದೆ. ಫೇಸ್‌ಬುಕ್‌ನಲ್ಲಿ ಹರಿದಾಡಿದ ಪ್ರಚೋದನಾಕಾರಿ ವಿಡಿಯೊಗಳಿಂದ ಕೋಮು ಗಲಭೆ ಅಂದು ಇನ್ನಷ್ಟು ಉಲ್ಬಣಿಸಿತ್ತು ಎಂದು ಆರೋಪಿಸಲಾಗಿದೆ. ಸಮಿತಿಯೊಂದನ್ನು ರಚಿಸಿ ಈ ಕುರಿತು ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ ದಿಲ್ಲಿ ಸರಕಾರಕ್ಕೆ ಆದೇಶ ನೀಡಿತ್ತು.

ಸುಮಾರು 40 ಕೋಟಿ ಬಳಕೆದಾರರಿರುವ ಫೇಸ್‌ಬುಕ್‌ ವೇದಿಕೆಯಲ್ಲಿ ವದಂತಿಗಳು ಹಬ್ಬುವುದು ಮತ್ತು ಕೋಮು ಸೌಹಾರ್ದತೆ ಕದಡುವಂಥ ದ್ವೇಷ ಪೂರಿತ ಭಾಷಣಗಳನ್ನು ನಿಯಂತ್ರಿಸಲು ಕೈಗೊಳ್ಳಲಾದ ಕ್ರಮಾವಳಿ (ಅಲ್ಗಾರಿದಮ್‌) ಕುರಿತು ವಿಸ್ತೃತ ಮಾಹಿತಿ ನೀಡುವಂತೆ ಕಂಪನಿಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸೂಚಿಸಿದೆ. ಗ್ರಾಹಕರ ಖಾಸಗಿ ಮಾಹಿತಿ, ಅವರ ಆನ್‌ಲೈನ್‌ ಚಟುವಟಿಕೆಗಳು ಹ್ಯಾಕ್‌ ಮಾಡಲಾಗದಂತೆ ವಹಿಸಲಾದ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಕೂಡ ಫೇಸ್‌ಬುಕ್‌ನಿಂದ ಕೇಂದ್ರ ಸರಕಾರವು ಸ್ಪಷ್ಟನೆ ಬಯಸಿದೆ.

ಇತ್ತೀಚಿನ ಅಂತಾರಾಷ್ಟ್ರೀಯ ಮಟ್ಟದ ಸಮೀಕ್ಷೆಗಳಲ್ಲಿ ಫೇಸ್‌ಬುಕ್‌ನಲ್ಲಿ ಹಿಂಸೆಯ ಸಂಭ್ರಮ, ನಕಲಿ ಸುದ್ದಿಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸರಕಾರದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ವರ್ಷ ಈ ಸಂಬಂಧವೇ ಕೇಂದ್ರ ಸರಕಾರದಿಂದ ಹೊಸ ಐಟಿ ಕಾನೂನುಗಳನ್ನು ಜಾರಿಗೆ ತರಲಾಗಿತ್ತು. ಫೇಸ್‌ಬುಕ್‌ ಒಡೆತನ ವಾಟ್ಸ್‌ಆ್ಯಪ್‌ ಅನ್ನು ಕೂಡ ಭಾರತದಲ್ಲಿ ಸುಮಾರು 53 ಕೋಟಿ ಮಂದಿ ಬಳಸುತ್ತಿದ್ದಾರೆ.

Latest Indian news

Popular Stories