ಸರ್ವರಿಗೂ ಕ್ರಿಸ್ಮಸ್ ಶುಭಾಶಯ ಕೋರಿದ ಉಡುಪಿ ಧರ್ಮಾಧ್ಯಕ್ಷರಾದ ಬಿಷಪ್ ಜೇರಾಲ್ಡ್ ಲೋಬೊ

ಉಡುಪಿ:ಕ್ರಿಸ್‍ಮಸ್ ಸಂದೇಶ ಸ್ವರ್ಗ ಭುವಿಗಳಿಗೆ ಮಹದಾನಂದವನ್ನು ತಂದ ಸುದಿನವೇ ಕ್ರಿಸ್‍ಮಸ್. ದೇವಪುತ್ರ ಈ ಲೋಕದಲ್ಲಿ ಮುಗ್ಧ ಮಗುವಾಗಿ ಜನಿಸಿ, ಪಾಪವೊಂದನ್ನು ಬಿಟ್ಟು ಇನ್ನೆಲ್ಲದರಲ್ಲಿಯೂ ನಮ್ಮಂತೆಯೇ ಆಗಬಯಸಿದ ಯೇಸುಸ್ವಾಮಿ ಬಡವರಿಗೆ ಆಶಾಕಿರಣವಾಗಿ, ದುಃಖಿತರಿಗೆ ಸಾಂತ್ವನವಾಗಿ, ದೀನ ದಲಿತರ ಸಂಗಾತಿಯಾಗಿ, ನೊಂದವರ ಭರವಸೆಯಾಗಿ, ಬಹಿಷ್ಕೃತರ ಗೆಳೆಯನಾಗಿ ಬಂದರು.ಕಳೆದೆರಡು ವರ್ಷಗಳಿಂದ ಇಡೀ ವಿಶ್ವವೇ ಕೊರೋನ ಸೋಂಕಿನ ಅಟ್ಟಹಾಸಕ್ಕೆ ನಲುಗಿಹೋಗಿದೆ.

ಸಾವಿರಾರು ಜನರು ಈ ಸೋಂಕಿಗೆ ಒಳಗಾಗಿದ್ದಾರೆ. ಲಕ್ಷಾಂತರ ಕುಟುಂಬಗಳು ನಿರುದ್ಯೋಗ ಹಾಗೂ ಬಡತನಕ್ಕೆ ಬಲಿಯಾಗಿವೆ. ಬಸವಳಿದ ಈ ಲೋಕಕ್ಕೆ ಹೊಸ ಜೀವವನ್ನು ನೀಡುವ ಅಗತ್ಯವಿದೆ. ಕ್ರಿಸ್ತರ ಜನನದ ಕ್ರಿಸ್‍ಮಸ್ ಹಬ್ಬದ ಆಚರಣೆಯು ನಮ್ಮಲ್ಲಿ ಮಾನವೀಯತೆಯನ್ನು ಜೀವಂತಗೊಳಿಸಬೇಕು. ಮನುಷ್ಯನಿಗೆ ಮಾನವೀಯತೆಯು ಮರೀಚಿಕೆಯಾಗದೆ ಸ್ವಾತಂತ್ರ್ಯ, ಶಾಂತಿ, ಭಾವೈಕ್ಯತೆ, ಕ್ಷಮೆ, ಪ್ರೀತಿ, ಸಹನೆ, ಸಂಯಮ ಮತ್ತು ನೈತಿಕತೆಯನ್ನು ತನ್ನ ಉಸಿರಾಗಿಸಬೇಕಿದೆ.


ಕ್ರಿಸ್‍ಮಸ್ ಶಾಂತಿ-ಪ್ರೀತಿಯ ಉತ್ಸವ. ಈ ಉತ್ಸವವನ್ನು ಯೋಗ್ಯವಾಗಿ ಆಚರಿಸಲು ಶಕ್ತರಲ್ಲದ ಸಾವಿರಾರು ಜನರು ಮತ್ತು ಕುಟುಂಬಗಳು ನಮ್ಮ ನೆರೆಹೊರೆಯಲ್ಲಿವೆ. ಕ್ರಿಸ್‍ಮಸ್‍ನ ಭಾವವಾದ ಶಾಂತಿ, ಪ್ರೀತಿಯು ಹಂಚಿಕೊಳ್ಳುವುದರಲ್ಲಿ ಕಂಡುಬರಬೇಕು. ನಮ್ಮಲ್ಲಿ ಇರುವ ಸಂಪನ್ಮೂಲಗಳನ್ನು ಇಲ್ಲದವರೊಡನೆ ಕಿಂಚಿತ್ತಾದರೂ ಹಂಚಿಕೊಂಡರೆ ಕ್ರಿಸ್‍ಮಸ್‍ನ ಮೂಲ ಅರ್ಥವು ನಮಗೆ ಸ್ಪಷ್ಟವಾಗಬಹುದು. ‘ಶಾಂತಿ ದೇವನೊಲಿದ ಮನುಜರಿಗೆ’ ಎಂಬ ದೇವದೂತರ ಹಾಡು ನಮಗೆ ಅರ್ಥಪೂರ್ಣವಾಗಿ ಕೇಳಿಸಲಿ. ಈ ವರ್ಷದ ಕ್ರಿಸ್‍ಮಸ್ ನಮಗೆ ಸೋಂಕಿನ ಭೀತಿಯಿಂದ, ಅನಾರೋಗ್ಯದಿಂದ, ನಿರಾಶೆ-ದುಖಗಳಿಂದ ಬಿಡುಗಡೆಗೊಳಿಸಿ ಸ್ವರ್ಗದ ಶಾಂತಿ ಪ್ರೀತಿಯಿಂದ ನಮ್ಮನ್ನು ತುಂಬಲಿ.


ಸಮಸ್ತ ಸಹೋದರ ಸಹೋದರಿಯರಿಗೆ ಕ್ರಿಸ್‍ಮಸ್ ಹಬ್ಬದ ಹಾರ್ದಿಕ ಶುಭಾಷಯಗಳನ್ನು ಕೋರುತ್ತೇನೆ ಎಂದು ಉಡುಪಿಯ ಧರ್ಮಾಧ್ಯಕ್ಷರಾದ
ಜೆರಾಲ್ಡ್ ಲೋಬೊ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories